

ಕೋಲಾರ: ಉನ್ನತ ಸ್ಥಾನದಲ್ಲಿದ್ದುಕೊಂಡು ಇತರರಿಗೆ ಬುದ್ಧಿ ಹೇಳಬೇಕಾದ ಪೊಲೀಸ್ ಅಧಿಕಾರಿಯೇ ಕುಡಿದು ರಂಪಾಟ ಮಾಡಿರುವ ಘಟನೆ ಕೋಲಾರ ನಗರದ ಬಂಗಾರಪೇಟೆ ಸರ್ಕಲ್ನಲ್ಲಿರುವ ಸಾಮ್ರಾಟ್ ಅಶೋಕ ಬಾರ್ ಬಳಿ ಕಳೆದ ರಾತ್ರಿ ನಡೆದಿದೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ನಾರಾಯಣಸ್ವಾಮಿ ಕುಡಿದ ಮತ್ತಿನಲ್ಲಿ ಬಾರ್ ಸಿಬ್ಬಂದಿ ಜತೆ ಗಲಾಟೆ ಮಾಡಿಕೊಂಡು ಹಲ್ಲೆ ಯತ್ನಿಸಿದ್ದಾರೆ. ಕಾನೂನು ಪರಿಪಾಲನೆ ಮಾಡಬೇಕಾದ ಪೋಲಿಸಪ್ಪನಿಂದಲೇ ಗುಂಡಾ ವರ್ತನೆ ಪ್ರದರ್ಶನವಾಗಿದೆ.
ಕಂಠಪೂರ್ತಿ ಕುಡಿದಿದ್ದ ಎಎಸ್ಐ, ಬಾರ್ ಸಿಬ್ಬಂದಿ ನಮಸ್ಕಾರ ಹೇಳಿಲ್ಲ ಅಂತ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲಿನಿಂದ ಹೊಡೆಯಲು ಮುಂದಾಗಿದ್ದರು. ಸ್ಥಳದಲ್ಲಿ ಭಾರೀ ಹೈಡ್ರಾಮ ಮಾಡಿದಲ್ಲದೆ, ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಬಾರ್ ಕ್ಯಾಶಿಯರ್ ಶೇಷು ನಾಯಕ್ ಹಾಗೂ ಸಿಬ್ಬಂದಿ ಸಂತೋಷ್ ವಿರುದ್ಧ ಪ್ರಕರಣ ಸಹ ದಾಖಲಿಸಿದ್ದಾರೆ.
ಎಎಸ್ಐ ರಂಪಾಟದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಎಎಸ್ಐ ವಿರುದ್ಧ ಕೋಲಾರ ಬಾರ್ ಅಸೋಸಿಯೇಷನ್ ಅಧ್ಯಕ್ಷ ಚಲಪತಿ ಅವರು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.