

ಕೋಲಾರ : ಕರೊನಾ ಸಂಕಷ್ಟದ ಸಂದರ್ಭದಲ್ಲಿ ಶುಶ್ರೂಷಕಿಯರಿಂದ ದುಡಿಸಿಕೊಂಡ ಆರೋಗ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಕರ್ತವ್ಯಕ್ಕೆ ಬರಬೇಡಿ ಎಂದು ಮೌಖಿಕವಾಗಿ ಹೇಳಿದ್ದು, ನ್ಯಾಯ ಒದಗಿಸುವಂತೆ ಏಳು ಶುಶ್ರೂಷಕಿಯರು ಮನವಿ ಮಾಡಿಕೊಂಡಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ತಮದಾಗಿರುವ ಅನ್ಯಾಯದ ಬಗ್ಗೆ ಅಲವತ್ತುಕೊಂಡರಲ್ಲದೆ ಸೇವೆಯಲ್ಲಿ ಮುಂದುವರಿಸಿ, ಇಲ್ಲ ವಿಷ ಕೊಡಿ ಎಂದು ಕಣ್ಣೀರಿಟ್ಟರು.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದಲ್ಲಿ ಶುಶ್ರೂಷಕಿಯರ ನೇಮಕ ವೇಳೆ ಸಂದರ್ಶನಕ್ಕೆ ಹಾಜರಾಗಿದ್ದ 174ರಲ್ಲಿ 19 ಮಂದಿಗೆ ನೇಮಕಾತಿ ಪತ್ರ ನೀಡಿದ್ದರು. ಈ ಪೈಕಿ 10 ಅಭ್ಯರ್ಥಿಗಳು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರಲಿಲ್ಲ. ಈ ಸ್ಥಾನಕ್ಕೆ ಕಾಯ್ದಿರಿಸಿದ ಪಟ್ಟಿಯಲ್ಲಿದ್ದ ನಮ್ಮನ್ನು ನೇಮಕ ಮಾಡಿಕೊಂಡು ಆದೇಶ ಪತ್ರ ಕಳುಹಿಸಿದ್ದರು.
ಅದರಂತೆ ಆರು ತಿಂಗಳ ಹಿಂದೆ ಇಲಾಖೆ ಅಧಿಕಾರಿಗಳು ಸೂಚಿಸಿದ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದೆವು. 5 ತಿಂಗಳು ವೇತನ ನೀಡಿರಲಿಲ್ಲ. ಕೆಲ ದಿನಗಳ ಹಿಂದೆ ವೇತನ ಕೇಳಿದಾಗ ಬಾಕಿ ವೇತನ ಬಿಡುಗಡೆ ಮಾಡಿ ಕರ್ತವ್ಯಕ್ಕೆ ಹಾಜರಾಗಬೇಡಿ ಎಂದಿದ್ದಾರೆ ಎಂದು ಬೇತಮಂಗಲದ ಶುಶ್ರೂಷಕಿ ರೇಖಾ ನುಡಿದರು.
ಡಿಎಚ್‌ಒ ಡಾ.ಜಗದೀಶ್ ಅವರನ್ನು ಕೇಳಿದರೆ ಆರ್‌ಸಿಎಚ್ ಅಧಿಕಾರಿ, ಸಿಇಒ ಅವರನ್ನು ಕೇಳಿ ಎನ್ನುತ್ತಾರೆ. ಆರ್‌ಸಿಎಚ್ ಡಾ.ವಿಜಯಕುಮಾರಿ ಡಿಎಚ್‌ಒ ಮೇಲೆ ಹೇಳುತ್ತಾರೆ. ಮತ್ತೊಮ್ಮೆ ಸಂದರ್ಶನ ಎದುರಿಸಿ ಎನ್ನುತ್ತಾರೆ. ಆದೇಶ ಪತ್ರ ಪಡೆದು ಐದಾರು ತಿಂಗಳು ಕರ್ತವ್ಯ ನಿರ್ವಹಿಸಿದ ನಂತರ ಮತ್ತೊಮ್ಮೆ ಸಂದರ್ಶನ ಎದುರಿಸುವ ಅಗತ್ಯವೇನು ಎಂದರು.
ನೇಮಕಾತಿಗೆ ನಡೆಯುತ್ತಿದ್ದ ಸಂದರ್ಶನ ರದ್ದುಪಡಿಸುವಂತೆ ಒತ್ತಾಯಿಸಿದ್ದಕ್ಕೆ ಸಂದರ್ಶನ ರದ್ದುಗೊಳಿಸಿದ್ದರು. ಜಿಪಂ ಸಿಇಒ ಅವರನ್ನು ಭೇಟಿಯಾಗಿ ಅಳಲು ತೋಡಿಕೊಂಡಾಗ ಸೊಸೈಟಿ ಸಭೆ ಕರೆದು ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ ಎಂದರು.ಎಸ್ಸೆನ್ನಾರ್ ಆಸ್ಪತ್ರೆ ಶುಶ್ರೂಷಕಿ ಶಶಿಕಲಾ ಮಾತನಾಡಿ, ಎನ್‌ಎಚ್‌ಎಂನಡಿ ನೇಮಕಗೊಂಡು ಕರೊನಾ ವಾರಿಯರ್ಸ್ ಆಗಿ ಕೆಲಸ ಮಾಡಿದ್ದೇವೆ. ನನಗೂ ಕರೊನಾ ಪಾಸಿಟಿವ್ ಬಂದಿತ್ತು. ಇಂತಹ ಸಮಯದಲ್ಲೂ ಕೆಲಸ ಮಾಡಿದ ನಮಗೆ ಈ ಗತಿ ತಂದೊಡ್ಡಿದ್ದಾರೆ. ಸೇವೆಯಲ್ಲಿ ಮುಂದುವರಿಸದಿದ್ದರೆ ಕುಟುಂಬ ಸಮೇತರಾಗಿ ಧರಣಿ ನಡೆಸುತ್ತೇವೆ ಎಂದರು.
ಕರೊನಾ ಸಂದರ್ಭದಲ್ಲಿ 3 ತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟು ಸೇವೆ ಸಲ್ಲಿಸಿದ್ದೇವೆ, ನಾವೂ ಬದುಕಬೇಕು, ಕೆಲಸ ಕೊಡಿ ಇಲ್ಲದಿದ್ದರೆ ವಿಷ ಕೊಡಿ ಎಂದು ಚಂದ್ರಕಲಾ ನುಡಿದರು.
ಶುಶ್ರೂಷಕಿಯರಾದ ಕ್ಯಾಲನೂರಿನ ಶಾರದಾಬಾಯಿ, ಮದ್ದೇರಿ ಪಿಎಚ್‌ಸಿಯ ಸುಪ್ರಿಯಾ, ಮಾಲೂರಿನ ಚೈತ್ರಾ, ಸುಮಾ ಅನ್ಯಾಯ ತೆರೆದಿಟ್ಟರು.