ಇಎಸ್‌ಐ ಆಸ್ಪತ್ರೆ ಸ್ಥಾಪನೆಗೆ ಯತ್ನ

21-klr-5
Published on
ಕೋಲಾರ:  ಜಿಲ್ಲೆಯ ನರಸಾಪುರ, ವೇಮಗಲ್, ಮಾಲೂರು ಸೇರಿ ಇನ್ನಿತರ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 85 ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದು, ಇವರಿಗಾಗಿ ಇಎಸ್‌ಐ ಆಸ್ಪತ್ರೆ ಸ್ಥಾಪಿಸಲು ಪ್ರಯತ್ನ ನಡೆದಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
 ನಗರದ ಬಿಜೆಪಿ ಕಚೇರಿಯಲ್ಲಿ ಗ್ರಾಪಂ ಚುನಾವಣೆ ಸಂಬಂಧ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 50 ಹಾಸಿಗೆ ವ್ಯವಸ್ಥೆಯುಳ್ಳ ಇಎಸ್‌ಐ ಆಸ್ಪತ್ರೆ ತೆರೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೈಗಾರಿಕೆ ಮತ್ತು ಆರೋಗ್ಯ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ. ಅದಷ್ಟು ಬೇಗನೆ ಕಾರ್ಮಿಕರ ಹಿತಕ್ಕಾಗಿ ಸೂಕ್ತ ಸ್ಥಳದಲ್ಲಿ ಇಎಸ್‌ಐ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದರು.
 ಕೆಲವು ಇಲಾಖೆಗಳಲ್ಲಿ ಅಧಿಕಾರಿಗಳ ವರ್ತನೆ ಇನ್ನು ಸರಿ ಹೋಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿ ತಂದಿರುವ ಜನಪರ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಮೀನ-ಮೇಷ ಎಣಿಸುತ್ತಿದ್ದಾರೆ. 28 ವರ್ಷಗಳಿಂದ ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆ ಸುಧಾರಣೆ ಅಷ್ಟು ಸುಲಭವಲ್ಲ, ಆದರೂ ಪ್ರತಿಯೊಂದು ಇಲಾಖೆಯ ಸಭೆಯನ್ನು ಪ್ರತ್ಯೇಕವಾಗಿ ನಡೆಸಿ ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಪ್ರಗತಿ ಪರಿಶೀಲಿಸಿ ಕ್ರಮ ಕೈಗೊಳ್ಳುವೆ ಎಂದು ತಿಳಿಸಿದರು.
 ಜನ ಸೇವೆಗಾಗಿ ನಾನು ಸಂಸದನಾಗಿರುವೆ, ರಾಜಕೀಯದಲ್ಲಿ ಇನ್ನಷ್ಟು ಕಾಲ ಇರಬೇಕೆಂಬ ಹಂಬಲವಿದೆ. ನನಗೆ ಹಣ ಸಂಪಾಧನೆಗಿಂತ ಕೋಲಾರ ಲೋಕಸಭಾ ಕ್ಷೇತ್ರದ ಮತದಾರರ ಋಣ ತೀರಿಸಬೇಕೆಂಬ ಮಹಾದಾಸೆಯಿದೆ. ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರುವೆ ಎಂದರು.
 ಮಾಲೂರು ತಾಲೂಕಿನ ಬನಹಳ್ಳಿಯಲ್ಲಿ ಯೋಜನೆಗೆ ಚಾಲನೆ ನೀಲಾಗಿದೆ. ಇದರ ಬಳಿಕ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿಯನ್ನು ಆದರ್ಶ ಗ್ರಾಮವಾಗಿ ಕೈಗೆತ್ತಿಕೊಂಡು ಸಮಗ್ರವಾಗಿ ಅಭಿವೃದ್ಧಿಪಡಿಸುವೆ ಎಂದು ತಿಳಿಸಿದರು.
 ಶ್ರೀನಿವಾಸಪುರ ಸಮೀಪ ರೈಲ್ವೆ ವರ್ಕ್‌ಶಾಪ್ ಸ್ಥಾಪನೆಗೆ ಅಗತ್ಯವಾದ 430 ಎಕರೆ ಭೂಮಿ ಸ್ವಾಧೀನಕ್ಕೆ ಪಡೆಯುವ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡಲಾಗುವುದು. ಈ ಮೊದಲು 260 ಎಕರೆ ಮಾತ್ರ ಸರ್ಕಾರ ಜಾಗವನ್ನು ಗುರುತಿಸಲಾಗಿತ್ತು. ಈಗಾ ಸುತ್ತಮುತ್ತಲಿನ ಜಾಗವನ್ನು ಸ್ವಾಧೀನಕ್ಕೆ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
 ಕೆ.ಜಿ.ಎಫ್‌ನ ಬಿಜಿಎಂಎಲ್ ವ್ಯಾಪ್ತಿಯಲ್ಲಿನ 3200 ಎಕರೆ ಜಾಗದಲ್ಲಿ ಕೈಗಾರಿಕೆಗಳ ಪಾರ್ಕ್ ಸ್ಥಾಪಿಸುವ ಸಲುವಾಗಿ ಈಗಾಗಲೇ ಕೈಗಾರಿಕೆ ಸಚಿವರಾದ ಜಗಧೀಶ್ ಶೆಟ್ಟರ್ ಅವರು ಸ್ಥಳಪರಿಶೀಲನೆ ನಡೆಸಿದ್ದಾರೆ, ಜತೆಗೆ ಚಿನ್ನದ ಗಣಿ ಪುನಶ್ಛೇತನಕ್ಕೂ ಪ್ರಯತ್ನ ನಡೆದಿದ್ದು ತಜ್ಞರು ವರದಿ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.
 ಕೈಗಾರಿಕೆಗಳ ಸಿಎಸ್‌ಆರ್ ನಿಧಿಯಿಂದ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಸಲುವಾಗಿ ನ.27ರ ನಂತರ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಲು ದಿನಾಂಕ ನಿಗಧಿ ಪಡಿಸಲಾಗುವುದು ಎಂದರು.

ಏನೂ ಕೆಲಸ ಮಾಡದೆ ಪುಕ್ಕಟೆ ಪ್ರಚಾರ ಪಡೆಯಲು ನನಗೆ ಇಷ್ಟವಿಲ್ಲ. ಏನಾದರೂ ಸಾಧಿಸಿ ಜನ ಬಳಿ ಸಾಧನೆ ಹೇಳಿಕೊಳ್ಳಬೇಕೆಂಬ ಆಸೆಯಿದೆ. ಈ ಹಿಂದೆ ಸಂಸದರ ಆದರ್ಶ ಗ್ರಾಮ ಯೋಜನೆ ಹೇಗೆ ನಡೆದಿದೆ ಎಂಬುದು ಜನರಿಗೆ ಅರ್ಥವಾಗಿದೆ. ಪ್ರತಿಯೊಂದು ಇಲಾಖೆಯನ್ನು ಜೋಡಿಸಿಕೊಂಡು ಆದರ್ಶ ಗ್ರಾಮ ಯೋಜನೆ ಯಶಸ್ವಿಗೆ ನಿರ್ಧರಿಸಲಾಗಿದೆ. ಮುನಿಸ್ವಾಮಿ, ಸಂಸದ

ಜಿಲ್ಲೆಗೆ ಸಮರ್ಥ ಉಸ್ತುವಾರಿ ಸಚಿವರು ಬೇಕು: ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಸಮರ್ಥವಾಗಿ ಕಾರ್ಯ ನಿರ್ವಹಿಸುವ ಜಿಲ್ಲಾ ಉಸ್ತುವಾರಿ ಸಚಿವರು ಬೇಕಾಗಿದೆ. ಹಾಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಎಲ್ಲ  ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದಿಂದ ಹೆಚ್ಚು ಅನುದಾನ ತಂದು ಮಾದರಿ ಜಿಲ್ಲೆಯನ್ನಾಗಿಸಲು ನನ್ನ ಸಹಕಾರ ಸದಾಕಾಲ ಇರುತ್ತದೆ ಎಂದು ಮುನಿಸ್ವಾಮಿ ಮಾರ್ಮಿಕವಾಗಿ ನುಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net