

ಬೆಂಗಳೂರು:
ಸುದ್ದಿ ಗುರುತಿಸುವ ಚಾಕಚಕ್ಯತೆ ವರದಿಗಾರರಲ್ಲಿದ್ದಾಗ ಗ್ರಾಮೀಣ ಪರಿಸರದ ವಿಶೇಷ ವರದಿಗಳು ಕೂಡಾ ಹಲವಾರು ಬಾರಿ ರಾಜ್ಯಮಟ್ಟದ ಚಿಂತನೆಗೆ ಪೂರಕವಾಗುತ್ತದೆ. ಆದ್ದರಿಂದ ಗ್ರಾಮೀಣ ವರದಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆ.ಯೂ.ಡಬ್ಲ್ಯೂ.ಜೆ) ಆಶ್ರಯದಲ್ಲಿ ನಡೆದ ಪತ್ರಕರ್ತ ಭೀಮಣ್ಣ ಗಜಾಪುರ ಅವರು ರಚಿಸಿದ ’ಕೂಡ್ಲಿಗಿ ವಿಸ್ಮಯ-ಅಭಿವೃದ್ಧಿ ಪತ್ರಿಕೋದ್ಯಮ ಎಂಬ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಪರ್ತಕರ್ತರೂ ತಂತ್ರಜ್ಞಾನದ ಬೆಳವಣಿಗೆಗೆ ತಕ್ಕಂತೆ ಇವತ್ತಿನ ಕಾಲಘಟ್ಟಕ್ಕೆ ತಮ್ಮ ಬುದ್ದಿಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದರು. ಪತ್ರಿಕೋದ್ಯಮವನ್ನು ನಾವು ಅವಸರದ ಸಾಹಿತ್ಯ ಎಂದೇ ಪರಿಗಣಿಸಿದ್ದೇವೆ, ಆದರೆ ಪತ್ರಿಕೆಯ ವಿಶೇಷ ವರದಿಗಳು ಅಂತ್ಯವಲ್ಲದ ಸಾಹಿತ್ಯ ಎಂದು ಅವರು ಹೇಳಿದರು.
ಇಂದಿನ ಪತ್ರಿಕೋದ್ಯಮವು ಬದಲಾವಣೆಯ ತಂತ್ರಜ್ಞಾನಕ್ಕೆ ತಕ್ಕಂತೆ ವೇಗವಾಗಿ ಸಾಗುತ್ತಿದೆ. ಹಾಗಾಗಿ ಪತ್ರಕರ್ತರೆಲ್ಲರೂ ವೇಗದ ಆ ಬೆಳವಣಿಗೆಗೆ ತಕ್ಕಂತೆ ವೃತ್ತಿಯಲ್ಲಿ ಹೊಂದಿಕೊಳ್ಳುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ,, ಗ್ರಾಮೀಣ ಸಮಸ್ಯೆಗಳಿಗೆ ಕನ್ನಡಿಯಂತಿರುವ ವಿಶೇಷ ವರದಿಗಾರಿಕೆ ಕೂಡಾ ಇಂದು ಪತ್ರಿಕೋದ್ಯಮಕ್ಕೆ ಅತ್ಯಗತ್ಯ ಎಂದರು.
ಭಾರತೀಯ ಕಾರ್ಯನಿರತ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಕೆಯೂಡಬ್ಲ್ಯೂಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್ ಮಾತನಾಡಿದರು.
ಇದೇ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದ ಸ್ಮರಣ ಸಂಚಿಕೆಯನ್ನೂ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ಯೂ.ಡಬ್ಲ್ಯೂ.ಜೆ ಕಾರ್ಯದರ್ಶಿ ಮತ್ತೀಕೆರೆ ಜಯರಾಮ, ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೆರೆಗೋಡು, ರಾಜ್ಯ ಖಜಾಂಚಿ ವಾಸುದೇವ ಹೊಳ್ಳ ವೇದಿಕೆಯಲ್ಲಿದ್ದರು.
ಅಗಲಿದ ಪತ್ರಕರ್ತರಿಗೆ ಶ್ರದ್ದಾಂಜಲಿ:
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಮೈಸೂರುಮಿತ್ರ ಸಂಪಾದಕ ಗಣಪತಿ, ಅರಸೀಕೆರೆಯ ಕನ್ನಡಪ್ರಭ ವರದಿಗಾರ ಶಾಂತಕುಮಾರ್ ಸೇರಿದಂತೆ ಹಲವರಿಗೆ ಒಂದು ನಿಮಿಶ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು.