

ಶಿವಮೊಗ್ಗ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಶುಕ್ರವಾರ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.
ಸಿದ್ದರಾಮಯ್ಯ ಅವರು ಮಳೆಹಾನಿ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿದ್ದ ವೇಳೆ ಗಡಿಭಾಗ ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಅವರ ಕಾರಿನೊಳಗೆ ವೀರ ಸಾವರ್ಕರ್ ಭಾವಚಿತ್ರ ಎಸೆದು ನಂತರ ಅವರು ಕುಶಾಲನಗರಕ್ಕೆ ಹೋಗುವಾಗ ಕಾರಿನ ಮೇಲೆ ಮೊಟ್ಟೆ ಎಸೆದಿದ್ದಾರೆ ಎಂದು ಕಿಡಿಕಾರಿದರು.
ಮಾನವೀಯತೆ ನೆಲೆಯಲ್ಲಿ ಸಂತ್ರಸ್ತರಿಗೆ ನೆರೆ ಪರಿಹಾರ ನೀಡದಿರುವ ಸರ್ಕಾರ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಕುಮ್ಮಕ್ಕು ನೀಡಿದ್ದು ಶಿವಮೊಗ್ಗದಲ್ಲಿ ನಡೆದಿರುವ ಗಲಾಟೆಗೆ ಶಾಸಕ ಕೆ.ಎಸ್.ಈಶ್ವರಪ್ಪ ಅವರೇ ನೇರ ಕಾರಣ. ಅಶಾಂತಿ ವಾತಾವರಣ ಸೃಷ್ಟಿಯಾಗಲು ಹಾಗೂ ಕೋಮು ಸೌಹಾರ್ದತೆ ಹದಗೆಡಲು ಅವರೇ ಹೊಣೆಗಾರರು. ತಕ್ಷಣವೇ ಅವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಸಿದ್ದರಾಮಯ್ಯ ಅವರ ಕಾರಿನ ಮೇಲೆ ಉದ್ದೇಶಪೂರ್ವಕ ಮೊಟ್ಟೆ ಎಸೆದಿದ್ದಾರೆ. ಪೊಲೀಸರು ಕಿಡಿಗೇಡಿಗಳನ್ನು ಬಂಧಿಸುವ ನಾಟಕವಾಡಿ ಬಿಡುಗಡೆ ಮಾಡಿದ್ದಾರೆ. ಈ ಘಟನೆ ಬಿಜೆಪಿ ಸರ್ಕಾರದ ಹೈಡ್ರಾಮಾ ಎಂದು ಕಿಡಿಕಾರಿದರು. ರಾಜಕೀಯ ಲಾಭಕ್ಕಾಗಿ ಈ ರೀತಿಯ ಕೃತ್ಯವನ್ನು ಮಾಡುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಶಿವಮೊಗ್ಗಕ್ಕೆ ಕೆಟ್ಟ ಹೆಸರು ಬರಲು ಈಶ್ವರಪ್ಪ ನೇರ ಕಾರಣ ಎಂದರು.
ಈ ಪ್ರಕರಣದ ಬಂಧಿತರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರದ ಕುಮ್ಮಕ್ಕು ಮತ್ತು ಪ್ರಚೋದನೆಯೇ ಇದಕ್ಕೆ ಕಾರಣ. ನೆರೆ ಹಾವಳಿ ವೀಕ್ಷಣೆಗೆ ಹೋಗಿದ್ದ ಪ್ರತಿಪಕ್ಷದ ನಾಯಕರಿಗೇ ರಕ್ಷಣೆ ಇಲ್ಲವಾಗಿದೆ. ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪ್ರಕರಣದಲ್ಲಿ ಭಾಗಿಯಾದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ವೈ.ಎಚ್.ನಾಗರಾಜ್, ಕಲಗೋಡು ರತ್ನಾಕ್, ಎಸ್.ಪಿ.ಶೇಷಾದ್ರಿ, ಸಿ.ಎಸ್.ಚಂದ್ರಭೂಪಾಲ್, ಕೆ.ದೇವೇಂದ್ರಪ್ಪ, ಜಿ.ಡಿ.ಮಂಜುನಾಥ್, ಚಂದ್ರಶೇಖರ್,ರೇಖಾ ರಂಗನಾಥ್, ಯಮುನಾ ರಂಗೇಗೌಡ ಇದ್ದರು.