

> ಕಿರುವಾರ ಎಸ್.ಸುದರ್ಶನ್ ಕೋಲಾರ
ಕೋಲಾರ ಹಾಲು ಒಕ್ಕೂಟದಲ್ಲಿ(ಕೋಮುಲ್) ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಚಿಕ್ಕಬಳ್ಳಾಪುರ ಒಕ್ಕೂಟಕ್ಕೆ ವರ್ಗಾವಣೆ ಮಾಡುವ ಮೂಲಕ ವಿಭಜನೆಯ ಪ್ರಕ್ರಿಯೆಗೆ ಚುರುಕು ನೀಡಲಾಗಿದೆ.
ಕೋಮುಲ್ ವಿಭಜಿಸಿ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟ ರಚನೆ ಮಾಡಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಸರ್ಕಾರ ಒಕ್ಕೂಟ ವಿಭಜನೆ ಮಾಡಿ ಆದೇಶಿಸಿದ್ದ ಜತೆಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿತ್ತು. ಈಗ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದ್ದು, ಈ ಆದೇಶಕ್ಕೆ ಹಲವರಿಂದ ಅಸಮಾಧಾನ ವ್ಯಕ್ತವಾಗಿದೆ.
ಸಹಕಾರ ಇಲಾಖೆಯಿಂದ ಒಕ್ಕೂಟಕ್ಕೆ ಒಟ್ಟು 685 ಹುದ್ದೆ ಮಂಜೂರಾಗಿದ್ದು, 2024ರ ಅಕ್ಟೋಬರ್ 31ಕ್ಕೆ ಅನ್ವಯವಾಗುವಂತೆ ಒಟ್ಟು 372 ಅಧಿಕಾರಿ, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಚಿಕ್ಕಬಳ್ಳಾಪುರಕ್ಕೆ 175 ಹಾಗೂ ಕೋಲಾರ ಒಕ್ಕೂಟಕ್ಕೆ 197 ಹುದ್ದೆ ಹಂಚಿಕೆ ಮಾಡಲಾಗಿದೆ.
ಅಧಿಕಾರಿಗಳ ಬೇಸರ: ವರ್ಗಾವಣೆ ವೇಳೆ ಅಧಿಕಾರಿಗಳ ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ಕೋಲಾರ ಹಾಲು ಒಕ್ಕೂಟ ನೌಕರರ ಸಂ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಹಕಾರ ಸಂಗಳ ಜಂಟಿ ನಿಬಂಧಕರಿಗೆ ಮನವಿ ಸಲ್ಲಿಸಿತ್ತು. ಆದರೆ ಮನವಿಗೆ ಸ್ಪಂದಿಸದೆ ಏಕಾಏಕಿ ವರ್ಗಾವಣೆ ಮಾಡಿ ಆದೇಶಿಸಿ, ಸ್ಥಳದಿಂದ ವಿಮುಕ್ತಿಗೊಳಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಕೇಂದ್ರ ಕಚೇರಿ ಸೇರಿ ತಾಲೂಕಿನಲ್ಲಿರುವ ಶಿಬಿರ ಕಚೇರಿಗಳಲ್ಲಿ ಅಧಿಕಾರಿ, ಸಿಬ್ಬಂದಿ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅನುಕೂಲಕ್ಕೆ ತಕ್ಕಂತೆ ಮಕ್ಕಳನ್ನು ಶಾಲಾ, ಕಾಲೇಜುಗಳಿಗೆ ಸೇರಿಸಿದ್ದಾರೆ. ಈಗ ಏಕಾಏಕಿಯಾಗಿ ವರ್ಗಾವಣೆ ಮಾಡಿ, ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ ಎಂದು ವರ್ಗಾವಣೆಯಾಗಿರುವ ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.
* ವಿನಾಯಿತಿ ನೀಡಲು ಮನವಿ
ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮನೆಗಳನ್ನು ಮಾಡಿಕೊಂಡು ನೆಲೆಸಿರುವ ಹಾಗೂ ಆಯಾ ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಅಲ್ಲಿಯೇ ಮುಂದುವರಿಸಬೇಕು. ಮಕ್ಕಳ ವಿದ್ಯಾಭ್ಯಾಸ ಹಾಗೂ ಅವಲಂಬಿತ ತಂದೆ ತಾಯಿಗಳ ಪೋಷಣೆಗೆ ಆಯಾ ಜಿಲ್ಲೆಗಳ ನಿವಾಸಿಗಳನ್ನು ಆಯಾ ಜಿಲ್ಲೆಗಳಿಗೆ ಸಿಮೀತಗೊಳಿಸಿ ನಿಯೋಜಿಸಬೇಕು. ನಿವೃತ್ತಿ ಅಂಚಿನಲ್ಲಿರುವ, ಕನಿಷ್ಠ ಎರಡು ವರ್ಷಗಳ ಸೇವಾವಧಿ ಇರುವ ಅಧಿಕಾರಿಗಳ ಹಂಚಿಕೆಯಲ್ಲಿ ವಿನಾಯಿತಿ ನೀಡಬೇಕು. ಅಧಿಕಾರಿ, ಸಿಬ್ಬಂದಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಾನವೀಯತೆ ಹಾಗೂ ನ್ಯಾಯದಡಿ ಸೂಕ್ತ ಮಾನದಂಡ ರಚಿಸಿ, ನಂತರ ಸಿಬ್ಬಂದಿ ಹಂಚಿಕೆ ಮಾಡಬೇಕು ಎಂದು ನೌಕರರು ಮನವಿ ಮಾಡಿದ್ದರು.
* ನ.30ರಂದು ವರ್ಗಾವಣೆ
ನೂತನವಾಗಿ ರಚನೆಗೊಂಡಿರುವ ಚಿಕ್ಕಬಳ್ಳಾಪುರ ಒಕ್ಕೂಟಕ್ಕೆ ನ.30ರಂದು ಅಧಿಕಾರಿ, ನೌಕರರನ್ನು ನಿಯೋಜಿಸಿ ವರ್ಗಾವಣೆ ಮಾಡಿದ್ದು, ನೌಕರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಸೇವೆಯಿಂದ ಕಾರ್ಯವಿಮುಕ್ತಿಗೊಳಿಸಿ, ಸದರಿಯವರು ಕಾರ್ಯ ವರದಿ ಮಾಡಿಕೊಳ್ಳವುದನ್ನು ಚಿಕ್ಕಬಳ್ಳಾಪುರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಲು ಸೂಚಿಸಲಾಗಿದೆ. ಒಂದು ವೇಳೆ ಕಾರ್ಯಭಾರ ಇದ್ದಲ್ಲಿ ಸಂಬಂಧಪಟ್ಟವರಿಗೆ ಹಸ್ತಾಂತರಿಸಲು ಆದೇಶದಲ್ಲಿ ಸೂಚಿಸಲಾಗಿದೆ.
* ಮಾಜಿ ನಿರ್ದೇಶಕರ ಹಸ್ತಕ್ಷೇಪ ಆರೋಪ
ಒಕ್ಕೂಟದ ಮಾಜಿ ನಿರ್ದೇಶಕರು ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ವರ್ಗಾವಣೆಯಾಗಿರುವ ಕೆಲ ಅಧಿಕಾರಿಗಳು ಆರೋಪಿಸಿದ್ದಾರೆ. ಆಡಳಿತ ಮಂಡಳಿಯ ಅಧ್ಯಕ್ಷ, ನಿರ್ದೇಶಕರೊಂದಿಗೆ ಅಷ್ಟೇನೂ ಗುರುತಿಸಿಕೊಳ್ಳದೆ ಕೆಲಸದ ಕಡೆ ಗಮನ ನೀಡಿದ್ದೆವು. ಆದರೆ, ಒಕ್ಕೂಟದಲ್ಲೇ ಸುಮಾರು ವರ್ಷಗಳಿಂದ ಠಿಕಾಣಿ ಹೂಡಿರುವ ಕೆಲವರು ವರ್ಗಾವಣೆ ವಿಚಾರದಲ್ಲಿ ಮಾಜಿ ನಿರ್ದೇಶಕರ ಮೊರೆ ಹೋಗಿದ್ದಾರೆ. ಅವರು ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ ನಮ್ಮನ್ನು ಎತ್ತಂಗಡಿ ಮಾಡಿಸಿದ್ದಾರೆ. ಕೇಳಿದರೆ ವಿಭಜನೆಯ ನೆಪ ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
* ಸಮಸ್ಯೆ ಹೇಳಿಕೊಳ್ಳಲೂ ಅವಕಾಶ ನೀಡಿಲ್ಲ
ಕೋಲಾರ&ಚಿಕ್ಕಬಳ್ಳಾಪುರ ಒಕ್ಕೂಟ ವಿಭಜನೆ ಸಂದರ್ಭದಲ್ಲೇ ಮೈಸೂರು&ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟಗಳು ವಿಭಜನೆಗೊಂಡಿದ್ದು, ಒಕ್ಕೂಟ ವಿಭಜನೆ ಪೂರ್ವದಲ್ಲಿದ್ದ ಸಿಬ್ಬಂದಿ ವಿಭಜನೆ ಬಳಿಕ ಮೈಸೂರು ಅಥವಾ ಚಾಮರಾಜ ಒಕ್ಕೂಟದ ಸೇವೆಯಲ್ಲಿ ಮುಂದುವರಿಯುವ ಬಗ್ಗೆ ಎಲ್ಲ ಅಧಿಕಾರಿ, ಸಿಬ್ಬಂದಿ ತಪ್ಪದೆ ಲಿಖಿತ ಒಪ್ಪಿಗೆ ನೀಡಬೇಕು. ಒಂದು ವೇಳೆ ಲಿಖಿತ ಒಪ್ಪಿಗೆ ನೀಡದಿದ್ದಲ್ಲಿ, ವರ್ಗಾವಣೆ ಮಾಡಿದ ಸ್ಥಳಕ್ಕೆ ಕಡ್ಡಾಯವಾಗಿ ನಿಯೋಜನೆಗೊಳ್ಳಬೇಕು. ಆದರೆ ಕೋಲಾರ, ಚಿಕ್ಕಬಳ್ಳಾಪುರ ಒಕ್ಕೂಟದಲ್ಲಿ ಹಿರಿಯ ಅಧಿಕಾರಿಗಳು ಇದಕ್ಕೆ ಅವಕಾಶ ನೀಡಿಲ್ಲ. ಈ ವರ್ಗಾವಣೆ ತೀರ್ಮಾನ ಏಕ ಪಯವಾಗಿದೆ ಎಂದು ವರ್ಗಾಯಿತರು ಬೇಸರ ವ್ಯಕ್ತಪಡಿಸಿದ್ದಾರೆ.
ಕೋಟ್...
ಏಕಾಏಕಿಯಾಗಿ ವರ್ಗಾವಣೆ ಆದೇಶ ಮಾಡಿರುವುದು ಆತಂಕ ಮೂಡಿಸಿದೆ. ಒಕ್ಕೂಟವು ವಿಭಜನೆಯಾದಾಗ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಕೋಲಾರ ಜಿಲ್ಲೆಗೆ ವರ್ಗಾವಣೆ ಆಗುತ್ತದೆ ಎಂದು ಭಾವಿಸಿದ್ದೆ. ಮುನ್ಸೂಚನೆ ನೀಡದೆ ವರ್ಗಾವಣೆ ಮಾಡಿದ್ದಾರೆ. ಸೌಜನ್ಯಕ್ಕೂ ನಮ್ಮ ಅಭಿಪ್ರಾಯ ಪಡೆದುಕೊಂಡಿಲ್ಲ.
> ಹೆಸರು ಹೇಳಲು ಇಚ್ಛಿಸದ ಅಧಿಕಾರಿ.