

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ಮತ್ತು ಚೆನ್ನೈನ ಜರ್ನಲ್ ಆಫ್ ಡೈಲಾಗ್ಸ್ ಆನ್ ನಾಲೆಡ್ಜ್ ಇನ್ ಸೊಸೈಟಿ ಆಶ್ರಯದಲ್ಲಿ ಸಮಾಜದಲ್ಲಿ ಜ್ಞಾನ ಸಂವಾದ ಸಮಾವೇಶವನ್ನು ಫೆ.20ರಿಂದ 22ರವರೆಗೆ ವಿವಿ ಬಸವಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.
ಇಂದು ಜ್ಞಾನದ ವಿವಿಧ ಆಯಾಮಗಳ ಕುರಿತು ಚರ್ಚೆ ಅವಶ್ಯಕವಾಗಿದೆ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಬಲವಾಗಿದೆ. ಆದರೆ ಈ ಜ್ಞಾನ ಎಲ್ಲರನ್ನೂ ತಲುಪದೇ ಒಂದು ಚೌಕಟ್ಟಿನ ಮಿತಿಯೊಳಗಿದೆ. ಯಾವುದು ಜ್ಞಾನ ಎಂಬ ಜಿಜ್ಞಾಸೆ ಕಾಡುವಂತಾಗಿದೆ. ಜ್ಞಾನದ ವಿಸ್ತರಣೆ ಮತ್ತು ಪ್ರಯೋಗಶೀಲತೆ ಭಾಗವಾಗಿ ಸಂವಾದ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಜ್ಞಾನದ ಆಯ್ಕೆಗಳ ಬಗ್ಗೆ ವಿಚಾರ ವಿನಿಮಯಕ್ಕಾಗಿ ಸಮಾವೇಶ ಆಯೋಜಿಸಿದ್ದು, ದೇಶದ ವಿವಿಧ ವಿಭಾಗಗಳ ಗಣ್ಯರು, ರೈತರು, ಕಲಾವಿದರು, ತಜ್ಞರು, ಕುಶಲಕರ್ಮಿಗಳು, ಕಲಾವಿದರು, ಸಾಮಾಜಿಕ ಹೋರಾಟಗಾರರು, ವಿದ್ವಾಂಸರು, ಸಂಗೀತಗಾರರು, ಅಲೆಮಾರಿಗಳು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿ ಅಭಿಪ್ರಾಯ ಮಂಡಿಸುವರು ಎಂದರು.
ಸಮಾವೇಶದ ಸಂಯೋಜಕ ಪ್ರೊ. ಮೇಟಿ ಮಲ್ಲಿಕಾರ್ಜುನ್ ಮಾತನಾಡಿ, ಫೆ.20ರಂದು ಸಮಾಜದಲ್ಲಿನ ಜ್ಞಾನ ಸಮಾನ ಮತ್ತು ನ್ಯಾಯಯುತ ಸಮಾಜಕ್ಕೆ ಅಡಿಪಾಯ, ಬಡತನ ಮತ್ತು ಜ್ಞಾನದ ಪಶ್ನೆ, ಕನ್ನಡದ ಜ್ಞಾನ ಸಂಪದಾಯಗಳ ಕುರಿತು ವಿಚಾರಗೋಷ್ಠಿ ಇರಲಿವೆ. 21ರಂದು 21ನೇ ಶತಮಾನದಲ್ಲಿ ಸ್ವರಾಜ್ಯ ಕಲ್ಪಿಸಿಕೊಳ್ಳುವುದು, ಜ್ಞಾನದ ಸಮಸ್ಯೆ ಕುರಿತು ಹಾಗೂ ಅಭಿವೃದ್ಧಿ ಪ್ರವಚನ, ಜನರ ಚಳವಳಿಯಲ್ಲಿ ಜ್ಞಾನ, ಕೃತಕ ಬುದ್ಧಿಮತ್ತೆ, ಕಲೆ ಮತ್ತು ಜ್ಞಾನ ಕುರಿತು ವಿಚಾರಗೋಷ್ಠಿ ನಡೆಯಲಿವೆ. 22ರಂದು ಭಾರತವು ಜಾಗತಿಕ ದಕ್ಷಿಣದಿಂದ ಧ್ವನಿಯಾಗಿ ಜ್ಞಾನದ ಆಯಾಮ ಕುರಿತು ವಿಚಾರಗೋಷ್ಠಿ ನಡೆಯಲಿದೆ ಎಂದು ತಿಳಿಸಿದರು.
ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಟಿ.ಅವಿನಾಶ್, ಕನ್ನಡ ಪ್ರಾಧ್ಯಾಪಕ ಡಾ. ಪ್ರಕಾಶ್ ಮರಗನಳ್ಳಿ, ಕುವೆಂಪು ವಿವಿ ಪಿಆರ್‌ಒ ಡಾ. ಎಂ.ಆರ್.ಸತ್ಯಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.
ಭಾಷಾ ಶಾಸ್ತ್ರಜ್ಞ ಜಿ.ಎನ್.ದೇವಿ ಭಾಗಿ
20ರಂದು ಬೆಳಗ್ಗೆ 10ಕ್ಕೆ ಸಮಾವೇಶವನ್ನು ಭಾಷಾ ಶಾಸ್ತ್ರಜ್ಞ ಪ್ರೊ. ಜಿ.ಎನ್.ದೇವಿ ಉದ್ಘಾಟಿಸುವರು. ವಾರಾಣಸಿ ವಿದ್ಯಾಶ್ರಮದ ಡಿಕೆಎಸ್ ನಿಯತಕಾಲಿಕದ ಸುನಿಲ್ ಸಹಸ್ರಬುದ್ಧೆ ಆಶಯ ಭಾಷಣ ಮಾಡುವರು. ಕುಲಸಚಿವರಾದ ಎ.ಎಲ್.ಮಂಜುನಾಥ್, ಎಸ್.ಎಂ.ಗೋಪಿನಾಥ್, ಹಣಕಾಸು ವಿಭಾಗದ ಅಧಿಕಾರಿ ಎಚ್.ಎನ್.ರಮೇಶ್ ಭಾಗವಹಿಸುವರು ಎಂದು ಸಂಯೋಜಕ ಪ್ರೊ. ರಾಮಪ್ರಸಾದ್ ಹೇಳಿದರು.