

ಶಿವಮೊಗ್ಗ: ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪ್ರಮಾಣ ಪತ್ರ ಹಾಗೂ ಎಫ್‌ಒಎಸ್‌ಟಿಒಸಿ ಪ್ರಮಾಣ ಪತ್ರ ಪಡೆದ ನಂತರ ವ್ಯವಹಾರ ಪರವಾನಗಿ ಪಡೆಯುವ ಅಗತ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತಿಳಿಸಿದರು.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಸಹಯೋಗದಲ್ಲಿ ಆಹಾರ ಸುರಕ್ಷತಾ ಮತ್ತು ಪ್ರಮಾಣ ಪತ್ರ ಕೇಂದ್ರವು ಸೋಮವಾರ ಜಿಲ್ಲೆಯ ಆಹಾರ ಉದ್ಯಮಿದಾರರು, ಮಾರಾಟ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಲ್ವಿಚಾರಕರಿಗೆ ಏರ್ಪಡಿಸಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1954ರಲ್ಲಿ ಇದ್ದ ಅನೇಕ ಕಾನೂನುಗಳು ಈಗಲೂ ಇವೆ. ಡಿಜಿಟಲ್ ಯುಗದಲ್ಲಿ ಕಾಲ ಕಾಲಕ್ಕೆ ಕಾನೂನುಗಳು ಹೆಚ್ಚಳವಾಗುತ್ತಿವೆ. ಈ ನಿಟ್ಟಿನಲ್ಲಿ ಕಾನೂನುಗಳು ಯಾವಾಗ, ಹೇಗೆ ಬಳಕೆಯಾಗಬೇಕೆಂಬ ಬಗ್ಗೆ ವ್ಯಾಪಾರಸ್ಥರಿಗೆ ಅಧಿಕಾರಿಗಳು ಅರಿವು ಮೂಡಿಸಬೇಕು ಎಂದು ಹೇಳಿದರು.
ಅಧಿಕಾರಿಗಳಿಗೆ ಕೆಳ ಹಂತದ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿರಬೇಕು. ಇಂದು ಉದ್ಯಮಿಗಳು ನೂರಾರು ಸಮಸ್ಯೆ ಎದುರಿಸುತ್ತಿದ್ದಾರೆ. ಎಲ್ಲ ಕಾನೂನುಗಳನ್ನು ಅನುಷ್ಠಾನ ಮಾಡಲು ಮುಂದಾದರೆ ಒಂದು ಇಡ್ಲಿಗೆ 25 ರೂ. ಕೊಡಬೇಕಾಗುತ್ತದೆ. ದೇಶ ಉಳಿಯಬೇಕಾದರೆ ಎಲ್ಲವನ್ನೂ ಸರ್ಕಾರ ಮಾಡಲಾಗುವುದಿಲ್ಲ. ನಾವು ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದರು.
ಮಧ್ಯಮ ಮತ್ತು ಬಡ ವರ್ಗಗಳಿಗೆ ಅನುಕೂಲವಾಗುವಂತೆ ಸರ್ಕಾರ ನಿಯಮ ಸರಳೀಕರಣ ಮಾಡಬೇಕು. ಸರ್ಕಾರಗಳಿಗೆ ಕಿವಿ, ಕಣ್ಣು, ಇರುವುದಿಲ್ಲ. ಬಜೆಟ್ ಮಂಡನೆಗೂ ಮುನ್ನ ನಮ್ಮ ಹಕ್ಕನ್ನು ನಾವು ಕೇಳಬೇಕು. ಸರ್ಕಾರದಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡದಿದ್ದರೆ ಅವು ಉಳಿಯುವುದಿಲ್ಲ ಎಂಬುದನ್ನು ಸರ್ಕಾರ ಗಣನೆಗೆ ತೆಗೆದುಕೊಂಡು ನಿಯಮಾವಳಿ ರೂಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಉಪಾಧ್ಯಕ್ಷ ಜಿ.ವಿಜಯಕುಮಾರ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಂಕರನಾರಾಯಣ ಹೊಳ್ಳ, ಆಹಾರ ಸುರಕ್ಷತಾ ಅಧಿಕಾರಿಗಳಾದ ಸೋಮೇಶ್, ಗುರುರಾಜ್, ಸದಾಶಿವಪ್ಪ. ಶಶಿಕುಮಾರ್, ತರಬೇತುದಾರರಾದ ಸವಿತಾ, ಸಮುದಾಯ ಅಧಿಕಾರಿಗಳಾದ ಅನುಪಮಾ, ವಾಣಿಜ್ಯ ಕೈಗಾರಿಕಾ ಸಂಘದ ಕಾಯದರ್ಶಿ ಸುರೇಶ್, ಜಿಲ್ಲಾ ಸಂಯೋಜಕ ಬಿ.ಟಿ.ಹನುಮಂತಯ್ಯ, ಹೋಟೆಲ್ ಉದ್ಯಮಿ ಉದಯ ಕಡಂಬ ಇತರರಿದ್ದರು.