ಸಂವಿಧಾನ ಕುರಿತ ಅರಿವು ಅಗತ್ಯ

quiz (1)
ಸಾಗರದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಾಚಾರ್ಯ ಡಾ. ಸಣ್ಣಹನುಮಪ್ಪ ಬಹುಮಾನ ವಿತರಿಸಿದರು. ಡಾ. ಶ್ರೀಪಾದ ಹೆಗಡೆ, ಸತ್ಯನಾರಾಯಣ ಇತರರಿದ್ದರು.
Published on

ಸಾಗರ: ನಮ್ಮ ಸಂವಿಧಾನ ಪವಿತ್ರ ಗ್ರಂಥ ಎಂದು ಪೂಜಿಸಿ ಎತ್ತಿಡುವ ಬದಲು, ಅದು ಎಲ್ಲರಿಗೂ ಅತ್ಯಗತ್ಯವಾಗಿ ಬೇಕಾದ ಗ್ರಂಥ ಎನ್ನುವ ಅರಿವು ಬಂದಿರುವುದು ಸಕಾರಾತ್ಮಕ ಬೆಳವಣಿಗೆ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಸಣ್ಣಹನುಮಪ್ಪ ಹೇಳಿದರು.

ಸಾಗರ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿ, ಥಟ್ಟನೆ ಉತ್ತರ ಪಡೆದು, ಬಹುಮಾನ ವಿತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಭಾರತದ ಸಂವಿಧಾನ ಪವಿತ್ರವಾದ ಗ್ರಂಥ. ಅದು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ವಿದ್ಯಮಾನಗಳ ಆಗರ. ಅದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ಯಾರಿಗೆ ಭಾರತ ಗೊತ್ತಿರುತ್ತದೆಯೋ ಅವರಿಗೆ ಸಂವಿಧಾನ ಸುಲಭವಾಗಿ ಅರ್ಥವಾಗುತ್ತದೆ. ಭಾರತ ಎಂದರೆ ಭೌಗೋಳಿಕ ಪ್ರದೇಶವಲ್ಲ, ವಾಸ್ತವವಾಗಿ ಬಹುತ್ವ ಹೊಂದಿರುವ ದೇಶ ಎಂದರು.

ಜಗತ್ತಿನ ಬೇರೆ ಬೇರೆ ಸಂವಿಧಾನವನ್ನು ಅಧ್ಯಯನ ಮಾಡಿ, ಭಾರತಕ್ಕೆ ಎಂತಹ ಸಂವಿಧಾನ ಬೇಕು ಎಂಬುದನ್ನು ಯೋಚಿಸಿ ಅದ್ಭುತವಾದ ಸಂವಿಧಾನ ನೀಡಿದ್ದಾರೆ. ಜಾತ್ಯತೀತ ರಾಷ್ಟ್ರ ಎನ್ನುವ ಪದದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ಭಾರತ ಜಾತ್ಯತೀತ ರಾಷ್ಟ್ರವಾಗಬೇಕು ಎನ್ನುವ ಆಶಯ ಹೊಂದಿದ್ದರು. ಜಾತ್ಯತೀತ ಪದವನ್ನು ನಂತರದಲ್ಲಿ ಸೇರಿಸಿರುವುದು ದೊಡ್ಡ ವಿಷಯವಲ್ಲ ಎಂದು ಹೇಳಿದರು.

ಸಾಗರ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಶ್ರೀಪಾದ ಹೆಗಡೆ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಸತ್ಯನಾರಾಯಣ ಸಿರಿವಂತೆ, ಗೌರವ ಕಾರ್ಯದರ್ಶಿ ಜಿ.ನಾಗೇಶ್, ನಾರಾಯಣಮೂರ್ತಿ, ಸರಸ್ವತಿ ನಾಗರಾಜ್, ತಾಲೂಕ ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ಲೋಕೇಶಕುಮಾರ್, ಗುರುದತ್ತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net