

ಸಾಗರ: ಭಾರತೀಯ ಶ್ರೇಷ್ಠ ಪರಂಪರೆಯನ್ನು ಮುಂದಿನ ಪೀಳಿಗೆಗೂ ತಿಳಿಸುವ ಕೆಲಸ ಆಗಬೇಕಿದೆ. ಸಂಸ್ಕೃತಿ ಮತ್ತು ಸಂಸ್ಕಾರದ ಮಹತ್ವ ಅರಿಯಲು ಇದು ಸಹಕಾರಿ ಎಂದು ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಗರದ ಜೆಪಿ ನಗರದಲ್ಲಿರುವ ಕುಕ್ವಾಡದಾಂಬಾ ದೇವಸ್ಥಾನದಲ್ಲಿ ಜಂಗಮ ಮಹಿಳಾ ಸಮಾಜದಿಂದ ಆಯೋಜಿಸಿದ್ದ ಭೂಮಿ ಹುಣ್ಣಿಮೆ ಮಹತ್ವ ಪರಿಚಯಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಧಾರ್ಮಿಕ ಕಾರ್ಯಗಳಿಗೆ ಭಾರತೀಯ ಪರಂಪರೆಯಲ್ಲಿ ವಿಶೇಷ ಸ್ಥಾನಮಾನವಿದ್ದು, ಮಹಿಳೆಯರು ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿ ಸಂಪನ್ನಗೊಳಿಸುವುದು ಸಂತಸದ ಸಂಗತಿ. ಭೂಮಿ ಹುಣ್ಣಿಮೆ ಸಂದರ್ಭ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮವನ್ನು ಮಹಿಳಾ ಸಮಾಜ ನಡೆಸುತ್ತಿದೆ. ಇದನ್ನು ಯುವ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಮಹಿಳಾ ಸಮಾಜದ ಅಧ್ಯಕ್ಷೆ ಅರುಣಾ ಎಸ್. ಹಿರೇಮಠ, ಉಷಾ ಗಿರಿಧರ್, ಪ್ರಿಯಾ ರವಿಸ್ವಾಮಿ, ದಾಕ್ಷಾಯಿಣಿ, ನಿರ್ಮಲಾ, ಶಕುಂತಲಾ ಇತರರಿದ್ದರು.