ನೂತನ ಕಾನೂನುಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳಬೇಕು

B Dayanand
Published on

ಬೆಂಗಳೂರು: ದೇಶದಲ್ಲಿ ಜುಲೈ ೧ರಿಂದ ಮೂರು ಹೊಸ ಕಾಯ್ದೆಗಳು ಅನುಷ್ಠಾನವಾಗುವುದರಿಂದ ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನೂತನ ಕಾನೂನುಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಆಡುಗೋಡಿಯ ಸಿಎಆರ್ ಮೈದಾನದಲ್ಲಿ ಶುಕ್ರವಾರ ನಡೆದ ಮಾಸಿಕ ಕವಾಯತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ದೇಶದಲ್ಲಿ ಜಾರಿಯಿದ್ದ ಐಪಿಸಿ, ಸಿಆರ್‌ಪಿಸಿ ಹಾಗೂ ಸಾಕ್ಷ್ಯ ಕಾಯ್ದೆಗಳು ಬದಲಾಗಿವೆ. ಈ ಮೂರು ಕಾಯ್ದೆಗಳ ಬದಲಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷತಾ ಸಹಿಂಸೆ ಹಾಗೂ ಭಾರತೀಯ ಸಾಕ್ಷ್ಯ ಸಂಹಿತೆ ರಚಿಸಲಾಗಿದೆ. ಈ ಮೂರು ಕಾಯ್ದೆಗಳು ಜು.೧ರಿಂದ ಅನುಷ್ಠಾನಗೊಳ್ಳಲಿವೆ ಎಂದು ಹೇಳಿದರು.
ಈ ನೂತನ ಕಾನೂನುಗಳ ಪರಿಕರಗಳ ಹೊಸ ಸೆಕ್ಷನ್‌ಗಳು ಏನು? ಹೊಸ ಮತ್ತು ಹಳೆ ಸೆಕ್ಷನ್‌ಗಳ ಬದಲಾವಣೆ ಹಾಗೂ ವ್ಯತ್ಯಾಸಗಳ ಬಗ್ಗೆ ತಿಳಿದುಕೊಳ್ಳಬೇಕು. ದೇಶದಲ್ಲಿ ಒಂದು ಬಾರಿ ಕಾನೂನು ಅನುಷ್ಠಾನವಾದ ಬಳಿಕ ಅದನ್ನು ಸಂಪೂರ್ಣವಾಗಿ ಪರಿಪಾಲಿಸುವುದು ನಮ್ಮಲ್ಲೆರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಹೀಗಾಗಿ ಜುಲೈ ೧ರ ಪೂರ್ವದಲ್ಲಿಯೇ ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಈಗಾಗಲೇ ನಗರದ ಕೆಲ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಮುಂದಿನ ೧೫ ದಿನಗಳಲ್ಲಿ ಮತ್ತಷ್ಟು ಸಿಬ್ಬಂದಿಗೆ ತರಬೇತಿ ಪ್ರಾರಂಭವಾಗಲಿದೆ ಎಂದರು.

ಎಸಿಪಿಗಳು ಅರಿವು ಮೂಡಿಸಬೇಕು:
ಮುಖ್ಯವಾಗಿ ಎಸಿಪಿ ಮಟ್ಟದ ಅಧಿಕಾರಿಗಳು ತಮ್ಮ ಉಪವಿಭಾಗದ ಅಧೀನದಲ್ಲಿರುವ ಎಲ್ಲಾ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು, ಸಬ್ ಇನ್‌ಸ್ಪೆಕ್ಟರ್‌ಗಳು, ತನಿಖಾಧಿಕಾರಿಗಳು, ತನಿಖಾಧಿಕಾರಿ ಸಹಾಯಕರು, ಠಾಣಾ ಬರಹಗಾರರುಗಳ ಪೈಕಿ ನಾಲ್ಕೈದು ಮಂದಿಗೆ ಹೊಸ ಕಾನೂನುಗಳ ಬಗ್ಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸಬೇಕು. ಇದರ ಜತೆಗೆ ಅಭಿಯೋಜನಾ ಅಧಿಕಾರಿಗಳು, ನ್ಯಾಯಾಲಯದ ಅಧಿಕಾರಿಗಳು ಅಥವಾ ಸ್ಥಳೀಯ ಕಾನೂನು ಕಾಲೇಜುಗಳ ನೆರವು ಪಡೆದು ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದಾಗಿ ಹೇಳಿದರು.

ಕಿರುಹೊತ್ತಿಗೆ ಓದಿ ಅರ್ಥೈಸಿಕೊಳ್ಳಿ:
ಅಧಿಕಾರಿಗಳು ಮತ್ತು ಸಿಬ್ಬಂದಿ ತರಬೇತಿ ಜತೆಗೆ ಸ್ವಯಂ ಕಲಿಕೆ ಮುಖಾಂತರ ಈ ಕಾನೂನುಗಳ ಬಗ್ಗೆ ಅರಿವು ಪಡೆದುಕೊಳ್ಳಬೇಕು. ಈ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಲಭ್ಯವಿದ್ದು, ಯುಟ್ಯೂಬ್ ಮತ್ತು ಇತರೆ ಆ್ಯಪ್‌ಗಳಲ್ಲೂ ಮಾಹಿತಿ ಪಡೆಯಬಹುದು. ಅಂತೆಯೆ ಕರ್ನಾಟಕ ಪೊಲೀಸ್ ಅಕಾಡೆಮಿ ಕೂಡ ಈ ಬಗ್ಗೆ ಕಿರುಹೊತ್ತಿಗೆಗಳನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಪೊಲೀಸ್ ಠಾಣೆಗಳಿಗೂ ನೀಡಲಾಗಿದೆ. ಅವುಗಳನ್ನು ಓದಿ ಅರ್ಥೈಸಿಕೊಳ್ಳಿ. ಏನಾದರೂ ಸಂಶಯವಿದ್ದಲ್ಲಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದರು.

ಹೊಸ ಕಾನೂನಿನ ಅನ್ವಯ ಪ್ರಕರಣ ದಾಖಲು:
ಸಾರ್ವಜನಿಕರು ಜುಲೈ ೧ರಿಂದ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರೆ, ನೂತನ ಕಾನೂನುಗಳ ಅನ್ವಯ ಎಫ್‌ಐಆರ್ ದಾಖಲಿಸಬೇಕಾಗುತ್ತದೆ. ಹೀಗಾಗಿ ಪೊಲೀಸ್ ಅಧಿಕಾರಿಗಳು ಯಾವ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂಬುದರ ಬಗ್ಗೆ ಯಾವುದೇ ಸಂಶಯವಿಲ್ಲದೆ ಸಮಗ್ರ ಮಾಹಿತಿ ತಿಳಿದುಕೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಫ್‌ಐಆರ್ ದಾಖಲಿಸಬೇಕು. ನ್ಯಾಯಾಲಯಗಳಲ್ಲಿ ಇಲಾಖೆಗೆ ಮುಜುಗರವಾಗದಂತೆ ಎಸಿಪಿ ಮಟ್ಟದ ಅಧಿಕಾರಿಗಳಿ ಗಮನಹರಿಸಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net