ಎದೆಯೊಳಗೆ ಚಾಕು ಇದ್ದಿದ್ದು ಒಂದು ವರ್ಷವಾದರೂ ಇವನಿಗೆ ಗೊತ್ತೇ ಆಗಲಿಲ್ಲ!

Chest
Published on

ನವದೆಹಲಿ: ಒಮ್ಮೆ ಚೂರಿ ಇರಿತಕ್ಕೆ ಒಳಗಾಗಿರುವ ಈತನ ಎದೆಯೊಳಗೆ ಚಾಕುವಿನ ತುಂಡು ಹಾಗೆಯೇ ಉಳಿದಿರುವುದು ಗೊತ್ತಾಗಿದ್ದು ಒಂದು ವರ್ಷದ ಬಳಿಕ!

ಒಂದು ವರ್ಷವಾದರೂ ಎದೆಯೊಳಗೆ ಚೂರಿಯ ತುಂಡೊಂದು ಉಳಿದಿರುವುದು ಹೊಸದೊಂದು ಉದ್ಯೋಗಕ್ಕೆ ನಡೆಸಿದ ವೈದ್ಯಕೀಯ ಪರೀಕ್ಷೆ ವೇಳೆ ಪತ್ತೆಯಾಗಿದೆ.

ಫಿಲಿಪ್ಪೈನ್ಸ್​ನ ಕಿಡಪವನ್ ಸಿಟಿಯ ಕೆಂಟ್​ ರಯಾನ್ ಟೊಮಾವೊ ಎಂಬ 36 ವರ್ಷದ ವ್ಯಕ್ತಿಯ ಎದೆಯೊಳಗೆ ಈ ಚಾಕು ತುಣುಕು ಕಂಡುಬಂದಿದೆ. ಕಳದೆ ವರ್ಷದ ಜನವರಿಯಲ್ಲಿ ಈತ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಆಗಂತುಕರು ಚಾಕುವಿನಿಂದ ಇರಿದಿದ್ದರು. ಆದರೆ ಆ ಸಂದರ್ಭದಲ್ಲಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ದಾಖಲಾಗಿದ್ದಾಗ, ಅವರು ಚಾಕುವಿನ ತುಣುಕನ್ನು ತೆಗೆಯದೇ ಹಾಗೆ ಗಾಯವನ್ನು ಹೊಲಿದು, ನೋವಿನ ಮಾತ್ರೆ ಕೊಟ್ಟಿದ್ದರು ಎಂಬದು ಗೊತ್ತಾಗಿದೆ ಎಂದು ವ್ಯಕ್ತಿ ಆರೋಪಿಸಿದ್ದಾರೆ.

ಸದ್ಯ ಸ್ಕ್ಯಾನಿಂಗ್ ವರದಿಯಲ್ಲಿ ಕಂಡುಬಂದಿರುವ ಚಾಕು 4 ಇಂಚು ಉದ್ದವಿದೆ. ಅದು ಇದ್ದಿದ್ದರಿಂದ ನನಗೆ ಆಗಾಗ ಶೀತದ ವಾತಾವರಣದಲ್ಲಿ ನೋವು ಬರುತ್ತಿತ್ತು. ಆದರೆ ಯಾವ ಕಾರಣಕ್ಕೆ ಹಾಗೆ ನೋವು ಬರುತ್ತಿದೆ ಎಂಬುದು ಈಗ ಗೊತ್ತಾಗಿದೆ. ತಂಪಾದ ಹವಾಮಾನದ ಸಂದರ್ಭದಲ್ಲಿ ಮಾತ್ರ ನೋವು ಕಾಣಿಸಿಕೊಳ್ಳುತ್ತಿತ್ತು. ಕ್ರಮೇಣ ಅದು ಹಾಗೇ ಕಮ್ಮಿ ಆಗುತ್ತಿದ್ದುದರಿಂದ ಮತ್ತು ನೋವು ಅಷ್ಟು ತೀವ್ರವಾಗಿರದ್ದರಿಂದ ನಾನು ಆಸ್ಪತ್ರೆಗೆ ಹೋಗಿರಲಿಲ್ಲ ಎಂದು ಕೆಂಟ್ ಹೇಳಿದ್ದಾನೆ.

ಇನ್ನು ಈ ಬಗ್ಗೆ ಚಿಕಿತ್ಸೆ ಪಡೆಯಲು ತನ್ನಲ್ಲಿ ಅಷ್ಟು ಹಣವಿಲ್ಲ ಎಂದು ಹೇಳಿಕೊಂಡಿರುವ ಕೆಂಟ್​, ಅಂದು ಸರಿಯಾಗಿ ಚಿಕಿತ್ಸೆ ನೀಡದೆ ಚಾಕುವಿನ ತುಣುಕನ್ನು ಎದೆಯೊಳಗೇ ಉಳಿಸಿರುವ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಹೇಳಿಕೊಂಡಿದ್ದಾನೆ. ಚಾಕುವಿನ ತುಣುಕು ಶ್ವಾಸಕೋಶದಿಂದ ಸ್ವಲ್ಪ ದೂರದಲ್ಲೇ ಇದ್ದಿದ್ದರಿಂದ ಅಂಥ ಅಪಾಯ ಆಗಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net