

ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ(ಕೆಎಂಎಫ್)ವು ನೂತನ ನಂದಿನಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಖಾಸಗಿ ಹೋಟೆಲ್ನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಂದಿನಿ ಚೀಸ್, ನಂದಿನಿ ದೇಸಿ ಹಾಲು, ನಂದಿನಿ ಕ್ರೀಂ, ನ್ಯಾಚುರಲ್ ಐಸ್ಕ್ರೀಂ, ವೆನಿಲ್ಲಾ ಐಸ್ಕ್ರೀಂ ಕೇಕ್, ಗ್ರೀರ್ಕ್ಯೊಗರ್ಟ್ ಸೇರಿ ಮತ್ತಿತರರ ಉತ್ಪನ್ನಗಳನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಸಿಎಂ, ದೇಶದ ಪ್ರತಿಷ್ಠಿತ ಸಹಕಾರ ಸಂಸ್ಥೆಯಾಗಿರುವ ಕೆಎಂಎಫ್ನಲ್ಲಿ 14 ಹಾಲು ಒಕ್ಕೂಟಗಳು, 14,500ಕ್ಕೂ ಹೆಚ್ಚು ಹಾಲು ಉತ್ಪಾದಕ ಸಹಕಾರ ಸಂಘಗಳು ಹಾಗೂ 25 ಲಕ್ಷ ಹಾಲು ಉತ್ಪಾದಕರ ಸದಸ್ಯರಿದ್ದು, ಈ ಬೃಹತ್ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ರೈತರ ಜೀವನಕ್ಕೆ ದಾರಿ: ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿರುವ ಕೆಎಂಎಫ್ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸಿ ರೈತರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಕಲ್ಪಿಸುತ್ತಿದೆ. ನಿತ್ಯ ಗರಿಷ್ಠ 84.43 ಲಕ್ಷ ಲೀಟರ್ ಹಾಲಿನ ಉತ್ಪನ್ನಗಳು ನಗರ ಪ್ರದೇಶಗಳಲ್ಲಿ ಮಾರಾಟವಾಗುತ್ತಿದೆ. ಅದರ ಮೌಲ್ಯ ಮತ್ತು ಸರ್ಕಾರದ ಪೋತ್ಸಾಹಧನ ಸೇರಿ ನಿತ್ಯ 24 ಕೋಟಿ ಆದಾಯ ಬರುತ್ತಿದೆ. ರಾಜ್ಯದಲ್ಲಿ ನಿತ್ಯ ಹಾಲು ಪೂರೈಸಿದ ಸದಸ್ಯರಲ್ಲಿ ಶೇ.80ಕ್ಕೂ ಹೆಚ್ಚು ಸಣ್ಣ ರೈತರು ಹಾಲಿನ ಮಾರಾಟದಿಂದಲೇ ಜೀವನ ನಡೆಸುತ್ತಿದ್ದಾರೆ. ಹೈನುಗಾರಿಕೆ ಮೂಲಕ ಮಹಿಳೆಯರು ಸ್ವಾವಲಂಬಿಯಾಗುತ್ತಿದ್ದಾರೆ. ಹೆಚ್ಚು ಹಾಲು ಕೊಡುವ ದೇಸಿ ತಳಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಹಲವು ಯೋಜನೆ ರೂಪಿಸಿದೆ. ಬೇರೆ ರಾಜ್ಯಗಳಲ್ಲೂ ನಂದಿನ ಹಾಲಿನ ಮಾರುಕಟ್ಟೆ ವಿಸ್ತರಿಸಿದೆ ಎಂದು ಸಿಎಂ ಹೇಳಿದರು.
ಪ್ರೋತ್ಸಾಹಧನ ಹೆಚ್ಚಿಸಿ: ಪ್ರತಿ ಲೀಟರ್ ಹಾಲಿಗೆ ಸರ್ಕಾರ ನೀಡುತ್ತಿರುವ 5 ರೂ. ಪ್ರೋತ್ಸಾಹಧನವನ್ನು 6 ರೂಪಾಯಿಗೆ ಹೆಚ್ಚಿಸಬೇಕೆಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು. ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದಲ್ಲಿ ಹೈನುಗಾರಿಕೆ ಹೊರಗಿಡಬೇಕು. ಯುಎಇ ಸೇರಿ ವಿದೇಶಗಳಿಗೆ ನಂದಿನಿ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಸಂಸ್ಥೆಯನ್ನು ಮತ್ತಷ್ಟು ಬೆಳೆಸಬಹುದು ಎಂದರು.
ದೇಸಿಹಾಲು ಲೀಟರ್ಗೆ 75 ರೂ.
ರಾಮನಗರ ಜಿಲ್ಲೆ ಕನಕಪುರ ಮತ್ತು ಮಾಗಡಿ ತಾಲೂಕಿನ 1,500 ರೈತರಿಗೆ ಕೆಎಂಎಫ್ನಿಂದಲೇ ‘ಹಳ್ಳಿಕಾರ್’ ತಳಿಯ ರಾಸುಗಳನ್ನು ವಿತರಿಸಿ ನಿತ್ಯ 2,000 ಲೀ. ಹಾಲು ಸಂಗ್ರಹಿಸಲಾಗುತ್ತಿದೆ. ಈ ನಂದಿನಿ ದೇಸಿಹಾಲು ಸಾಮಾನ್ಯ ಹಾಲಿಗಿಂತ ಹೆಚ್ಚು ಪೌಷ್ಟಿಕಾಂಶ ಹೊಂದಿದೆ. ವಿಟಮಿನ್’ಎ’ ಮತ್ತು ‘ಡಿ’ ಜತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲ್ಯಾಕ್ಟೊಫೆರಿನ್ ಜೀವಸತ್ವ ಹಾಗೂ ನ್ಯೂರಾನ್ ಅಂಶ ಹೊಂದಿದ್ದು, ಆರೋಗ್ಯವರ್ಧಕ ಎನಿಸಿಕೊಂಡಿದೆ. ಹೀಗಾಗಿ, ಈ ಹಾಲಿನ ದರ ಲೀಟರ್ಗೆ 75 ರೂ. ಇದೆ.