

ನವದೆಹಲಿ: ಈಗಾಗಲೇ ಬೇರೆ ಬೇರೆ ರಾಜ್ಯಗಳಿಗೆ ನಂದಿನಿ ಹಾಲು ಪೂರೈಕೆ ಮಾಡುತ್ತಿರುವ ಕೆಎಂಎಫ್ (ಕರ್ನಾಟಕ ಹಾಲು ಮಹಾಮಂಡಲ) ರಾಷ್ಟ್ರ ರಾಜಧಾನಿ ದೆಹಲಿಗೆ ಅಕ್ಟೋಬರ್‌ನಿಂದ ದಿನಕ್ಕೆ 2.5 ಲಕ್ಷ ಲೀಟರ್ ನಂದಿನಿ ಹಾಲು ಪೂರೈಕೆ ಮಾಡಲು ಮುಂದಾಗಿದೆ.
ಈ ಕುರಿತಂತೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ನೇತೃತ್ವದ ಅಧಿಕಾರಿಗಳ ತಂಡ ದೆಹಲಿಗೆ ಬಂದಿದ್ದು, ಸುಮಾರು 70 ವಿತರಕರ ಜತೆಗೆ ಸಭೆಗಳನ್ನು ನಡೆಸಿದೆ. ಅದೇ ರೀತಿ. ವಿವಿಧ ಹಾಲು ಉತ್ಪನ್ನ ಘಟಕಗಳಿಗೂ ಭೇಟಿ ನೀಡಿದೆ.
ಕರ್ನಾಟಕದಲ್ಲಿ ಈಗ ಅಂದಾಜು 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಸದ್ಯ ಆಂಧ್ರ ಪ್ರದೇಶಕ್ಕೆ ದಿನಕ್ಕೆ 2.5 ಲಕ್ಷ ಲೀಟರ್, ಮಹಾರಾಷ್ಟ್ರಕ್ಕೆ 2.5 ಲಕ್ಷ ಲೀಟರ್ ಮತ್ತು ತಮಿಳುನಾಡಿಗೆ 40 ಸಾವಿರ ಲೀಟರ್ ಹಾಲನ್ನು ಕೆಎಂಎಫ್ ಪೂರೈಸುತ್ತಿದೆ. ಉತ್ತರ ಭಾರತದ ಮಾರುಕಟ್ಟೆಗೂ ಅದನ್ನು ಪೂರೈಕೆ ಮಾಡಬೇಕು ಎಂಬ ಉದ್ದೇಶ ಹೊಂದಿದ್ದೇವೆ ಎಂದು ಎಂ.ಕೆ. ಜಗದೀಶ್ ಮಾಹಿತಿ ನೀಡಿದ್ದಾರೆ.
ಮೊದಲ ಹಂತದಲ್ಲಿ ದೆಹಲಿಗೆ ದಿನಕ್ಕೆ 2.5 ಲಕ್ಷ ಲೀಟರ್ ಪೂರೈಸಲು ಪ್ಲಾನ್ ಮಾಡಿದ್ದೇವೆ. 6 ತಿಂಗಳೊಳಗೆ 5 ಲಕ್ಷ ಲೀಟರ್‌ಗೆ ಅದನ್ನು ಹೆಚ್ಚಿಸುವ ಚಿಂತನೆ ಇದೆ. ನಂದಿನಿ ಹಾಲನ್ನು ರೈತರಿಂದ ಲೀಟರ್‌ಗೆ ರೂ. 32ಕ್ಕೆ ಖರೀದಿ ಮಾಡುತ್ತಿದ್ದೇವೆ. ನವದೆಹಲಿಯಲ್ಲಿ ಹಾಲಿನ ಬೆಲೆ ಲೀ.ಗೆ ರೂ 54 ಇದೆ. ಕರ್ನಾಟಕದಿಂದ ದೆಹಲಿಗೆ ಹಾಲು ತರುವುದು ಬಹುದೊಡ್ಡ ಸವಾಲು. ಇದಕ್ಕೆ ಕಡಿಮೆ ಎಂದರೆ 53 ಗಂಟೆಗಳಾದರೂ ಬೇಕು ಎಂದರು.
ಹಾಸನ ಹಾಲು ಒಕ್ಕೂಟ ದೆಹಲಿಗೆ ಹಾಲು ಪೂರೈಕೆ ಮಾಡಲಿದೆ. ಮುಂದಿನ ದಿನಗಳಲ್ಲಿ ಭೋಪಾಲ್, ಇಂದೋರ್ ಹಾಗೂ ಉಜ್ಜೈನಿಯಲ್ಲಿ ನಂದಿನಿ ಹಾಲು ಪೂರೈಸುವ ಯೋಜನೆಯಿದೆ. ಇದಕ್ಕಾಗಿ ಶಿವಮೊಗ್ಗ ಜಿಲ್ಲಾ ಹಾಲು ಒಕ್ಕೂಟದ ಮೂಲಕ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಜಗದೀಶ್ ಹೇಳಿದ್ದಾರೆ.