

ಶಿವಮೊಗ್ಗ: ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ಕರ್ನಾಟಕ ಸಹಕಾರ ಹಾಲು ಮಹಾಮಂಡಳ ಹಾಗೂ ಶಿಮುಲ್ನಿಂದ ಭಾನುವಾರ 18 ವಿವಿಧ ಮಾದರಿಯ ನಂದಿನಿ ಕೇಕ್ ಹಾಗೂ ಮಫಿನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ಒಕ್ಕೂಟವು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ದೊರೆಯುವ ಬೇರೆ ಖಾಸಗಿ ಬ್ರಾೃಂಡ್‌ನ ಕೇಕ್ ಹಾಗೂ ಮಫಿನ್‌ಗಳಿಗಿಂತ ನಂದಿನಿ ಕೇಕ್ ಹಾಗೂ ಮಫಿನ್‌ಗಳು ಉತ್ತಮವಾಗಿವೆ. ಸ್ಪರ್ಧಾತ್ಮಕ ಬೆಲೆಯಲ್ಲೂ ನೀಡಲಾಗುತ್ತಿದೆ. ಶಿಮುಲ್ ಕಾರ್ಯವ್ಯಾಪ್ತಿಯ ಜಿಲ್ಲೆಗಳ 1,325 ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿನಿತ್ಯ 2 ಸರತಿಗಳಲ್ಲಿ ಸರಾಸರಿ 8 ಲಕ್ಷ ಕೆ.ಜಿ ಹಾಲು ಸಂಗ್ರಹಿಸಲಾಗುತ್ತಿದೆ.
ಅತ್ಯಾಧುನಿಕ ಯಂತ್ರಗಳಲ್ಲಿ ಸಂಸ್ಕರಿಸಿ, ಹಾಲು ಮತ್ತು ಹಾಲಿನ ಉತ್ಪನ್ನ ತಯಾರಿಸಲಾಗುತ್ತಿದೆ. ಒಕ್ಕೂಟ ವ್ಯಾಪ್ತಿಯಲ್ಲಿರುವ 1,836 ಹಾಲಿನ ಡೀಲರ್, 147 ಫ್ರಾಂಚೈಸಿ ಪಾರ್ಲರ್ ಹಾಗೂ 49 ಸ್ವಂತ ಪಾರ್ಲರ್‌ಗಳ ಮೂಲಕ ಪ್ರತಿನಿತ್ಯ 2.85 ಲಕ್ಷ ಲೀ. ಹಾಲು ಮತ್ತು ಸರಾಸರಿ 65 ಸಾವಿರ ಕೆ.ಜಿ ಮೊಸರು ಮಾರಾಟ ಮಾಡಲಾಗುತ್ತಿದೆ.
ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ಸಿಹಿ ಹಾಗೂ ಖಾರಾ, ಬ್ರೆಡ್, ಬನ್, ಐಸ್ ಕ್ರೀಂ ಸೇರಿ 150ಕ್ಕೂ ಹೆಚ್ಚು ಉತ್ಪನ್ನಗಳನ್ನು ಕೆಎಂಎಫ್ ಹಾಗೂ ಹಾಲು ಒಕ್ಕೂಟಗಳಿಂದ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಶಿಮುಲ್ನಿಂದ 100 ಗ್ರಾಂ ಪ್ಯಾಕ್‌ನಲ್ಲಿ ಖೋವಾ, ಕಡಲೆ ಮಿಠಾಯಿ ಮಾರಾಟ ಮಾಡಲಾಗುತ್ತಿದೆ. ಅದರೊಂದಿಗೆ 12 ಗ್ರಾಂ ಹಾಗೂ 25 ಗ್ರಾಂ ಪ್ಯಾಕ್‌ಗಳಲ್ಲಿ ಖೋವಾ ಕಡಲೆ ಮಿಠಾಯಿ ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ. ಉತ್ಪನ್ನದ ಗುಣಮಟ್ಟದ ಬಗ್ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲಿ ಜನಪ್ರಿಯತೆ ಹೊಂದಿರುವ ನಂದಿನಿ ಉತ್ಪನ್ನಗಳು ಗ್ರಾಹಕರ ಮನ್ನಣೆ ಗಳಿಸಿದ್ದು, ಈ ಸಾಲಿಗೆ ವಿಶ್ವ ಹಾಲು ದಿನದಂದು ನಂದಿನಿ ಕೇಕ್ ಮತ್ತು ಮಫಿನ್‌ಗಳು ಸೇರ್ಪಡೆಯಾಗುತ್ತಿವೆ ಎಂದು ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ತಿಳಿಸಿದ್ದಾರೆ.
ಬಿಡುಗಡೆಯಾದ ಉತ್ಪನ್ನಗಳು
ಸ್ಪಾಂಜಿ ವೆನಿಲ್ಲಾ ಕೇಕ್, ಫ್ರೂಟಿ ಸ್ಲೈಸ್ ಕೇಕ್, ಚಾಕೋ ಕಿತ್ತಲೆ ಸ್ಲೈಸ್ ಕೇಕ್, ವೆನಿಲ್ಲಾ ಸ್ಲೈಸ್ ಕೇಕ್, ಅನಾನಸ್ ಸ್ಲೈಸ್ ಕೇಕ್, ವೆನಿಲ್ಲಾ ಮಫಿನ್, ಚಾಕೊಲೆಟ್ ಮಫಿನ್, ಅನಾನಸ್ ಮಫಿನ್, ಸ್ಟ್ರಾಬೆರಿ ಮಫಿನ್, ಮಾವಾ ಮಫಿನ್, ಪ್ಲಮ್ ಕೇಕ್, ಚಾಕೋ ವೆನಿಲ್ಲಾ ಕೇಕ್, ಫ್ರೂಟ್ ಕೇಕ್, ವೆನಿಲ್ಲಾ ಕೇಕ್, ಚಾಕೊಲೇಟ್ ಕೇಕ್, ವಾಲ್ನಟ್ ಬನಾನಾ ಕೇಕ್, ಚಾಕೊಲೆಟ್ ಬೆಲ್ಲದ ಕೇಕ್ ಹಾಗೂ ಕೊಬ್ಬರಿ ಬೆಲ್ಲದ ಕೇಕ್ ಬಿಡುಗಡೆಗೊಳಿಸಲಾಯಿತು.