

ರಾಮನಗರ : ಕರ್ನಾಟಕ ಹಾಲು ಮಹಾಮಂಡಳದ ಬ್ರಾೃಂಡ್ ಅಂಬಾಸಿಡರ್ ಆಗಿ ಪುನೀತ್ ರಾಜ್‌ಕುಮಾರ್ ಕರ್ತವ್ಯ ನಿರ್ವಹಿಸಿದ ಪರಿಣಾಮ ನಂದಿನಿ ಉತ್ಪನ್ನಗಳ ಬ್ರಾೃಂಡ್ ಮೌಲ್ಯ ನೂರು ಕೋಟಿ ರೂ. ಹೆಚ್ಚಳ ಕಂಡಿದ್ದು. ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಕೆಎಂಎಫ್ ಮಾಜಿ ಅಧ್ಯಕ್ಷ ಪಿ. ನಾಗರಾಜು ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜನಜಾಗೃತಿ ವೇದಿಕೆ ಹಾಗೂ ತಾಲೂಕು ಬಮುಲ್ ವತಿಯಿಂದ ಮಂಗಳವಾರ ಹಮ್ಮಿ ಕೊಂಡಿದ್ದ ಪುನೀತ್ ರಾಜ್ ಕುಮಾರ್‌ಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಂದಿನ ಉತ್ಪನ್ನಕ್ಕೆ ಹೊರ ರಾಜ್ಯದ ಮಾರುಕಟ್ಟೆ ಹುಡುಕುವ ಸಲುವಾಗಿ ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರನ್ನು ಕೋರಲಾಗಿತ್ತು. ಆದರೆ, ಅವರು ಪ್ರತಿ ಗಂಟೆಗೆ 5 ಕೋಟಿ ರೂ.ಸಂಭಾವನೆ ಕೇಳಿದ್ದರು.
ಇದು ನಮ್ಮಿಂದ ಸಾಧ್ಯವಿಲ್ಲ ಎಂದು ಪುನೀತ್ ಅವರನ್ನು ಸಂಪರ್ಕಿಸಿದಾಗ, ತಂದೆಯ ಹಾದಿಯನ್ನೇ ಹಿಡಿದ ಅವರು ರೈತರ ಸಂಸ್ಥೆ ಎನ್ನುವ ಕಾರಣಕ್ಕೆ ಉಚಿತವಾಗಿ ಕೆಎಂಎಫ್ ಬ್ರಾೃಂಡ್‌ನ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸಿದರು.ನಂತರ ಮುಂಬೈನಲ್ಲಿ ಉತ್ಪನ್ನಗಳನ್ನು ಬಿಡುಗಡೆಗೊಳಿಸಲಾಯಿತು. ಇದರಿಂದ ಕೆಎಂಎ್ ಉತ್ಪನ್ನಗಳ ಮಾರುಕಟ್ಟೆ ಮೌಲ್ಯ 100 ಕೋಟಿ ರೂ. ಹೆಚ್ಚಳ ಕಂಡಿತು ಎಂದರು. ಇದರಿಂದಾಗಿ ರಾಜ್ಯದ ಸುಮಾರು 25 ಲಕ್ಷ ರೈತ ಕುಟುಂಬಗಳು ಜೀವನ ಕಂಡುಕೊಳ್ಳುವಂತೆ ಆಗಿದೆ. ಆದರೆ ಪುನೀತ್ ಸ್ಥಾನಕ್ಕೆ ಮತ್ಯಾರು ದಿಕ್ಕು ಎನ್ನುವಂತೆ ಆಗಿದೆ ಎಂದರು.
ಕಾಂಗ್ರೆಸ್ ಮುಖಂಡ ಸಯದ್ ಜಿಯಾವುಲ್ಲಾ ಮಾತನಾಡಿ, ರಾಮನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವ ಸಂಬಂಧ ದೇಣಿಗೆ ಸಂಗ್ರಹಿಸಲು 1993ರಲ್ಲಿ ರಾಜ್‌ಕುಮಾರ್ ಅವರನ್ನು ರಸಮಂಜರಿ ನಡೆಸಿಕೊಡಲು ಆಹ್ವಾನಿಸಲಾಗಿತ್ತು. ಇದಕ್ಕೆ ರಾಜ್‌ಕುಮಾರ್ ಸಹ ಒಪ್ಪಿದ್ದರು. ಆದರೆ ಕೆಲವರು ರಾಮನಗರದಲ್ಲಿ ಬಾಂಬ್ ಹಾಕಲಾಗುತ್ತದೆ ಎಂದು ಬೆದರಿಸಿ ಪತ್ರ ಬರೆದಿದ್ದರು. ಈ ವೇಳೆ ರಾಜ್ ಅವರನ್ನು ಕೋರಲು ಹೋಗಿದ್ದಾಗ ಯಾವುದೇ ಆತಂಕವಿಲ್ಲದೆ ಕಾರ್ಯಕ್ರಮ ನಡೆಸಿಕೊಡುವುದಾಗಿ ಹೇಳಿದ್ದರು. ಅದರಂತೆ ತಮ್ಮ ಇಡೀ ಕುಟುಂಬವನ್ನೇ ಕರೆತಂದು ಕಾರ್ಯಕ್ರಮ ನಡೆಸಿಕೊಟ್ಟು, ಇದರಿಂದಾಗ ಅಂದು ಎಲ್ಲ ಖರ್ಚುಗಳು ಕಳೆದು 17 ಲಕ್ಷ ರೂ. ಸಂಗ್ರಹವಾಗಿತ್ತು. ಡಾ.ರಾಜ್ ಗುಣವನ್ನೇ ಪುನೀತ್ ರೂಢಿಸಿಕೊಂಡಿದ್ದರು. ಅವರ ಸಾವು ದುಃಖ ತಂದಿದೆ ಎಂದರು.
ಜನಜಾಗೃತಿ ವೇದಿಕೆ ಅಧ್ಯಕ್ಷ ಕೆ. ಶೇಷಾದ್ರಿ ಮಾತನಾಡಿ, ರಾಮನಗರ ಜಿಲ್ಲೆಗೂ ಡಾ. ರಾಜ್ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಬಿಡದಿಯಲ್ಲಿಯೇ ಡಾ.ರಾಜ್ ಕುಟುಂಬದ ತೋಟವಿತ್ತು. ಪುನೀತ್ ಸಾವು ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಬೇಸರಿಸಿದರು. ಮಾಜಿ ಶಾಸಕರಾದ ಎಚ್.ಸಿ. ಬಾಲಕೃಷ್ಣ, ಕೆ.ರಾಜು, ಎಂಎಲ್‌ಸಿ ಎಸ್. ರವಿ, ಜಿಪಂ ಮಾಜಿ ಅಧ್ಯಕ್ಷ ಎಚ್.ಎನ್. ಅಶೋಕ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎರೇಹಳ್ಳಿ ಮಂಜು, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಚಿನ್, ನಿವೃತ್ತ ಪ್ರಾಂಶುಪಾಲ ಪ್ರೊ. ಶಿವನಂಜಯ್ಯ, ಎಲ್. ಚಂದ್ರಶೇಖರ್ ಮತ್ತಿತರರು ಇದ್ದರು. ಶಿಕ್ಷಕ ಶಿವಸ್ವಾಮಿ ನಿರೂಪಿಸಿದರು.
ಅಗಲಿಕೆ ಅರಗಿಸಿಕೊಳ್ಳಲು ಸಾಧ್ಯವಿಲ್ಲ : ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ದೇಶದ ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ವಿವೇಕಾನಂದರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಮೃತಪಟ್ಟರು. ಅದೇರೀತಿ ಪುನೀತ್ ರಾಜ್‌ಕುಮಾರ್ ಸಹ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ, ಚಿಕ್ಕವಯಸ್ಸಿನಲ್ಲಿಯೇ ನಮ್ಮಿಂದ ದೂರವಾಗಿದ್ದಾರೆ. ಆದರೆ, ಇವರ ಅಗಲಿಕೆಯನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲವಾದರೂ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಿದೆ. ರಾಜ್ಯದಲ್ಲಿ ಇಂದು ಕನ್ನಡ ಭಾಷೆ ಉಳಿದಿದೆ ಮತ್ತು ಬೆಳೆದಿದೆ ಎಂದರೆ ಅದಕ್ಕೆ ಡಾ.ರಾಜ್ ಮತ್ತು ಅವರ ಕುಟುಂಬ ಕಾರಣ. ಒಂದು ವೇಳೆ ಅಂದು ರಾಜ್‌ಕುಮಾರ್ ಅವರು ಗೋಕಾಕ್ ಚಳವಳಿಗೆ ಇಳಿಯದಿದ್ದರೆ ಚಳವಳಿ ವಿಫಲವಾಗುತ್ತಿತ್ತು. ಇದರಿಂದ ಕರ್ನಾಟಕ ಇರುವವರೆಗೂ ಕನ್ನಡ ಉಳಿಯುತ್ತದೆ, ಇದಕ್ಕೆ ಇಡೀ ರಾಜ್ ಕುಮಾರ್ ಕುಟುಂಬದ ಕೊಡುಗೆ ಅಪಾರ ಎಂದರು.