

ಶಿವಮೊಗ್ಗ: ಕಿತ್ತೂರು ರಾಣಿ ಚನ್ನಮ್ಮ ತನ್ನ ಸಾಮ್ರಾಜ್ಯದಲ್ಲಿ ಜನಸಾಮಾನ್ಯರನ್ನು ಒಗ್ಗೂಡಿಸಿಕೊಂಡು ಈ ದೇಶದ ಒಳಿತಿಗಾಗಿ ಸ್ವಾತಂತ್ರೃ ಹೋರಾಟ ಮಾಡಿದ್ದರು. ಸ್ವಾತಂತ್ರೃ ಸಂಗ್ರಾಮದಲ್ಲಿ ಅವರ ಕೊಡುಗೆ ಸ್ಮರಣೀಯ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತ ಹಾಗೂ ವೀರಶೈವ ಲಿಂಗಾಯಿತ ಪಂಚಮಸಾಲಿ ಸಂಘದಿಂದ ಗುರುವಾರ ಏರ್ಪಡಿಸಿದ್ದ ವೀರವನಿತೆ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷರು ಹಾಗೂ ಮೊಘಲರ ವಿರುದ್ಧ ಹೋರಾಡಿದ ವೀರವನಿತೆ ಕಿತ್ತೂರು ಚನ್ನಮ್ಮ ಸಮಾಜಕ್ಕೆ ಒಳಿತಾಗಬೇಕೆಂದು ಸದಾ ಯೋಚಿಸುತ್ತಿದ್ದರು ಎಂದರು.
ಎಲ್ಲರನ್ನೂ ಸ್ವಾತಂತ್ರೃ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತಿದ್ದ ಅವರು ಸಮಗ್ರವಾಗಿ ಯೋಚಿಸಿ ಆಡಳಿತ ಮಾಡಿದ್ದರು. ಚನ್ನಮ್ಮನ ಆದರ್ಶವನ್ನು ಇಂದಿನ ಯುವ ಪಿಳಿಗೆಗೆ ತಿಳಿಸುವ ಪ್ರಯತ್ನ ಮಾಡಬೇಕು. ಇದರಿಂದ ಅವರ ಹೋರಾಟದ ಬದುಕು, ಜೀವನಶೈಲಿ ಅರಿತುಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕನ್ನಡ ಉಪನ್ಯಾಸಕ ಡಾ. ಗಣೇಶ ಆರ್. ಕೆಂಚನಾಲ ಮಾತನಾಡಿ, 1778ರ ಅ.23ರಂದು ಬೆಳಗಾವಿಯ ಕಾಕತೀಯ ಹಳ್ಳಿಯಲ್ಲಿ ಜನಿಸಿದ ಚನ್ನಮ್ಮ, ಆರಂಭದಲ್ಲೇ ಕತ್ತಿವರಸೆ ಸೇರಿ ಅನೇಕ ಸಮರ ಕಲೆಗಳನ್ನು ಕಲಿತಿದ್ದರು ಎಂದು ವಿವರಿಸಿದರು.
ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಎಚ್.ವಿ.ಮಹೇಶ್ವರಪ್ಪ, ಕಾರ್ಯದರ್ಶಿ ಎಂ.ಸಿದ್ದೇಶ್ ಬೇಗೂರು, ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಪ್ಪ, ಶಿವಮೊಗ್ಗ ನಗರದ ಅಧ್ಯಕ್ಷ ಟಿ.ಎಂ.ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಮೇಶ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇತರರಿದ್ದರು.