

ತೀರ್ಥಹಳ್ಳಿ: ಹವಾಮಾನ ವೈಪರೀತ್ಯ, ಮಾರುಕಟ್ಟೆಯಲ್ಲಿ ದರ ಏರಿಳಿತದಿಂದ ಬಳಲುತ್ತಿರುವ ರೈತರ ನೆರವಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 44 ಲಕ್ಷ ರೈತ ಕುಟುಂಬಗಳು 884 ಕೋಟಿ ರೂ. ನೆರವು ಪಡೆಯುತ್ತಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಬಿಹಾರ ರಾಜ್ಯದ ಭಾಗಲ್ಪುರ ಜಿಲ್ಲೆಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರು ನೇರ ನಗದು ವರ್ಗಾವಣೆ (ಡಿಬಿಟಿ) ಕಾರ್ಯಕ್ರಮದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಯೋಜನೆ ಆಹಾರ ಉತ್ಪಾದಕ ರೈತರ ಕಣ್ಣೀರು ಒರೆಸುವ ಕಾರ್ಯಕ್ರಮ. ಈ ಮೊದಲು 18 ಕಂತುಗಳಲ್ಲಿ ದೇಶದ 11 ಕೋಟಿ ರೈತ ಕುಟುಂಬಗಳು ಒಟ್ಟು 3.46 ಲಕ್ಷ ಕೋಟಿ ರೂ. ಪಡೆದಿದ್ದಾರೆ. 19ನೇ ಕಂತಿನಲ್ಲಿ ದೇಶದ 9.7 ಕೋಟಿ ರೈತ ಕುಟುಂಬಗಳು 22 ಸಾವಿರ ಕೋಟಿ ರೂ. ಪಡೆಯಲಿದ್ದಾರೆ. ಈ ಯೋಜನೆಯಲ್ಲಿ ಜಿಲ್ಲೆಯ 1.42 ಲಕ್ಷ ರೈತ ಕುಟುಂಬಗಳು 26 ಕೋಟಿ ರೂ. ಹಾಗೂ 53.08 ಕೋಟಿ ರೂ. ತಾಲೂಕಿನ 3992 ಮಹಿಳೆಯರು ಸೇರಿ 18221 ಕುಟುಂಬಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗಲಿದೆ ಎಂದರು.
ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ. ನಟರಾಜ್, ಜಾನುವಾರುಗಳಿಗ ಮೇವಿನ ಕೊರತೆಯಾಗದಂತೆ ಇಲಾಖೆಯಿಂದ ಉಚಿತವಾಗಿ ನೀಡಲಾಗುವ ಮೇವಿನ ಬೀಜವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ರೈತರಿಗೆ ಸಂಬಂಧಿಸಿ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಸಹಾಯಕ ಕೃಷಿ ನಿರ್ದೇಶಕ ಪ್ರವೀಣ್ ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆಯ ಸೋಮಶೇಖರ್, ಕೃಷಿ ಇಲಾಖೆ ಅಧಿಕಾರಿ ಕೌಶಿಕ್ ಇದ್ದರು.