ಸೂರ್ಯ ‘ಓಂ’ನಾದ, ಬೇಡಿ ವಿವಾದ

Kiran
Published on

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಹರಡುತ್ತಿರುವ ಸುಳ್ಳು ಸುದ್ದಿಗಳಿಗೆ ಪ್ರಜ್ಞಾವಂತರು ಮತ್ತು ಪ್ರಸಿದ್ಧ ವ್ಯಕ್ತಿಗಳು ಕೂಡ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಇದೇ ರೀತಿಯ ಸುದ್ದಿ ವಿಡಿಯೋವೊಂದನ್ನು ಟ್ವೀಟ್ ಮಾಡಿ ನಿವೃತ್ತ ಐಪಿಎಸ್ ಅಧಿಕಾರಿ, ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅಪಹಾಸ್ಯಕ್ಕೀಡಾಗಿದ್ದಾರೆ.

ಅಮೆರಿಕದ ನಾಸಾ ಬಿಡುಗಡೆ ಮಾಡಿರುವುದೆಂದು ಹೇಳಲಾದ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಸೂರ್ಯ ‘ಓಂ’ ಎಂದು ಜಪಿಸುತ್ತಿರುವ ಶಬ್ದವನ್ನು ನಾಸಾ ಸೆರೆಹಿಡಿದಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ಅಸಲಿಗೆ ಈ ವಿಡಿಯೊವನ್ನು ಯಾರೊ ಕಿಡಿಗೇಡಿಗಳು ಸಿದ್ಧಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ನಾಸಾ ಸೂರ್ಯನ ಶಬ್ದದ ಬಗ್ಗೆ ಅಧ್ಯಯನ ನಡೆಸಿ ವಿಡಿಯೋಗಳನ್ನು ಈ ಹಿಂದೆ ಬಿಡುಗಡೆ ಮಾಡಿತ್ತು. ಆದರೆ ನಿಜವಾದ ವಿಡಿಯೋದಲ್ಲಿ ಎಲ್ಲಿಯೂ ‘ಓಂ’ ಧ್ವನಿ ಕೇಳಿಸುವುದಿಲ್ಲ. ಹೀಗಾಗಿ ಕಿರಣ್ ಬೇಡಿಯವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಜನರಿಗೆ ಮಾದರಿಯಾಗಿರುವವರು ಈ ರೀತಿ ಟ್ವೀಟ್ ಮಾಡುವ ಮುನ್ನ ಪರಿಶೀಲಿಸಬೇಕು ಎಂದು ಬುದ್ಧಿಮಾತು ಹೇಳಿದ್ದಾರೆ. ಮತ್ತೊಬ್ಬರು ಕಿರಣ್ ಬೇಡಿ ‘ಕೊಯಿ ಮಿಲ್ ಗಯಾ’ ಚಿತ್ರದ ಫ್ಯಾನ್ ಆಗಿದ್ದಾರೆ ಎಂದು ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net