

ಕರೊನಾ ವೈರಸ್ ಪ್ರಸರಣವಾಗುತ್ತಿರುವ ಈ ಸಂದರ್ಭದಲ್ಲಿ ಸುಳ್ಳು ಮಾಹಿತಿಗಳು, ಫೇಕ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಿ ತುಳುಕುತ್ತಿವೆ. ವಾಟ್ಸ್ಆ್ಯಪ್ನಲ್ಲೂ ತಪ್ಪು ಮಾಹಿತಿಗಳನ್ನೊಳಗೊಂಡ ನಕಲಿ ವಿಡಿಯೋಗಳು ಫಾರ್ವರ್ಡ್ ಆಗುತ್ತಿವೆ. ಅನೇಕರು ಅದನ್ನೇ ನಂಬಿ, ಮೋಸ ಹೋಗುತ್ತಿದ್ದಾರೆ.
ಈಗ ಈ ಸಾಲಿಗೆ ಮಾಜಿ ಪೊಲೀಸ್ ಅಧಿಕಾರಿ, ಸದ್ಯ ಪುದುಚೆರಿಯ ಲೆಫ್ಟಿನಂಟ್ ಗವರ್ನರ್ ಆಗಿರುವ ಕಿರಣ್ ಬೇಡಿ ಸೇರ್ಪಡೆಯಾಗಿದ್ದಾರೆ.
ಟ್ವಿಟರ್ನಲ್ಲಿ ಅನೇಕ ಕೋಳಿ ಮರಿಗಳು ಓಡುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿದ ಕಿರಣ್ ಬೇಡಿ, ಕರೊನಾ ವೈರಸ್ ಭಯದಿಂದ ಮೊಟ್ಟೆಗಳನ್ನು ಎಸೆಯಲಾಗಿತ್ತು. ಒಂದುವಾರದ ಬಳಿಕ ಅದೇ ಮೊಟ್ಟೆಯೊಡೆದು ಹೊರಬಂದ ಕೋಳಿ ಮರಿಗಳು ಇವು ಎಂದು ಬರೆದುಕೊಂಡಿದ್ದರು.
ಒಂದು ರಸ್ತೆ ಮತ್ತು ಅದರ ಅಕ್ಕಪಕ್ಕದ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ಕೋಳಿಮರಿಗಳು ಅಲ್ಲಲ್ಲಿ ಇರುವುದನ್ನು ವಿಡಿಯೋದಲ್ಲಿ ನೋಡಬಹುದು. ವ್ಯಕ್ತಿಯೋರ್ವ ಆ ಕೋಳಿಮರಿಗಳನ್ನು ತೋರಿಸಲೆಂದೇ ವಿಡಿಯೋ ಮಾಡಿದಂತಿದೆ.
ಈ ವಿಡಿಯೋ ವಾಟ್ಸ್ಆ್ಯಪ್ನಲ್ಲೆಲ್ಲ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಅದನ್ನೇ ಶೇರ್ ಮಾಡಿಕೊಂಡ ಕಿರಣ್ ಬೇಡಿ, ಕರೊನಾ ವೈರಸ್ ಭಯ ಇರುವುದರಿಂದ ಜನರು ಚಿಕನ್, ಮೊಟ್ಟೆ ತಿನ್ನಲು ಭಯಪಡುತ್ತಿದ್ದಾರೆ. ಹಾಗಾಗಿ ಮೊಟ್ಟೆಗಳನ್ನೆಲ್ಲ ಹೀಗೆ ಎಸೆಯಲಾಗಿತ್ತು. ಒಂದು ವಾರದ ಬಳಿಕ ಅವೆಲ್ಲ ಒಡೆದು ಮರಿಗಳಾಗಿವೆ. ಇದು ನಿಸರ್ಗ ಸೃಷ್ಟಿ ಎಂದು ಬರೆದಿದ್ದಾರೆ.
ಕಿರಣ್ ಬೇಡಿಯವರು ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೇ ನೆಟ್ಟಿಗರು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
ಇದೊಂದು ಸುಳ್ಳು ಮಾಹಿತಿ ಹೊಂದಿರುವ ವಿಡಿಯೋ. ಮೊದಲು ನಿಮ್ಮ ವಾಟ್ಸ್ಆ್ಯಪ್ನ್ನು ಅನ್ಇನ್ಸ್ಟಾಲ್ ಮಾಡಿಕೊಳ್ಳಿ ಎಂದು ಓರ್ವರು ಕಾಮೆಂಟ್ ಮಾಡಿದ್ದಾರೆ.
ಮೊಟ್ಟೆಗಳನ್ನು ಎಸೆದಿದ್ದರೆ ಅವು ಒಡೆಯುದಿಲ್ಲವಾ. ಹೇಗೆ ಮರಿಗಳು ಹೊರಬರುತ್ತವೆ ಎಂದು ಇನ್ನೋರ್ವರು ಪ್ರಶ್ನಿಸಿದ್ದಾರೆ.
ಈ ಮಧ್ಯೆ ಕಿರಣ್ ಬೇಡಿ ಶೇರ್ ಮಾಡಿದ ವಿಡಿಯೋ 508 ಸಾವಿರ ವೀವ್ಸ್ ಪಡೆದುಕೊಂಡಿದೆ. (ಏಜೆನ್ಸೀಸ್)