ರಾಮಮಂದಿರ ಪ್ರತಿಷ್ಠಾಪನೆ: ಜ. 22ರಂದು ಜನಿಸಿದ ಮಕ್ಕಳನ್ನು ಆಶೀರ್ವದಿಸಲು ಹಣ ಪಡೆಯಲ್ಲ!

ವಿಜಯವಾಣಿ - 2024-01-15T080025.056
Published on

ಅಯೋಧ್ಯೆ: ಜನವರಿ 22ರಂದು ಅಯೋಧ್ಯೆ ರಾಮಮಂದಿರದಲ್ಲಿ ನಡೆಯಲಿರುವ 'ಪ್ರಾಣ ಪ್ರತಿಷ್ಠಾಪನೆ' ಸಮಾರಂಭಕ್ಕೆ ಸದ್ಯ ದಿನಗಣನೆ ಆರಂಭಗೊಂಡಿದ್ದು, ದೇಶದ ನಾನಾ ಭಾಗಗಳಿಂದ ಹಲವಾರು ವಿಶೇಷ ಕೊಡುಗೆಗಳು ದೇವಾಲಯಕ್ಕೆ ಹರಿದುಬರುತ್ತಿವೆ. ಇದರೊಟ್ಟಿಗೆ ರಾಮನ ವಿಗ್ರಹ ಪ್ರತಿಷ್ಠಾಪನೆ ದಿನದಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಲಿದ್ದು, ರಾಜಕೀಯ ನಾಯಕರು ಸೇರಿದಂತೆ ಗಣ್ಯಾತಿ ಗಣ್ಯರು ಕಾರ್ಯಕ್ರಮಕ್ಕೆ ಆಹ್ವಾನ ಪಡೆದಿದ್ದಾರೆ. ಈ ಮಧ್ಯೆ ಜನವರಿ 22ರಂದು ಜನಿಸುವ ಮಕ್ಕಳನ್ನು ಆಶೀರ್ವದಿಸಲು ಪೋಷಕರಿಂದ ಹಣ ಪಡೆಯುವುದು ಅಥವಾ ಯಾವುದೇ ರೀತಿಯ ಉಡುಗೊರೆಗಳನ್ನು ಪಡೆಯುವುದಿಲ್ಲ ಎಂದು 'ಕಿನ್ನರ್' ಸಮುದಾಯ ಹೇಳಿದೆ.

"ಜನವರಿ 22ರಂದು ಜನಿಸಿದ ಮಕ್ಕಳನ್ನು ಆಶೀರ್ವದಿಸಲು ಪೋಷಕರಿಂದ ಸಾಂಪ್ರದಾಯಿಕ ಉಡುಗೊರೆಗಳೇ ಆಗಲಿ ಅಥವಾ ಹಣವನ್ನೇ ಆಗಲಿ ನಾವು ತೆಗೆದುಕೊಳ್ಳುವುದಿಲ್ಲ ಎಂದು ಬರೇಲಿಯ 'ಕಿನ್ನರ್' ಸಮುದಾಯ ತಿಳಿಸಿದೆ. ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ ದಿನದಂದು ಜನಿಸಿದ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಅಭಿನಂದನಾ ಗೀತೆಗಳನ್ನು ಹಾಡುತ್ತೇವೆ" ಎಂದು ಸಮುದಾಯದ ಶಾರದಾ ಅವರು ಹೇಳಿದರು.

"ನವಜಾತ ಶಿಶುಗಳನ್ನು ಆಶೀರ್ವದಿಸುವುದಕ್ಕಾಗಿ ನಾವು ಭೇಟಿ ನೀಡುವ ಮನೆಗಳಲ್ಲಿ ಆಯಾ ಕುಟುಂಬದವರಿಂದ ಯಾವುದೇ ರೀತಿಯಲ್ಲಿ ಹಣ ಸ್ವೀಕರಿಸುವುದಿಲ್ಲ. ಆದರೆ ಅವರು ಸಂತೋಷದಿಂದ ಏನಾದರೂ ಕೊಟ್ಟರೇ ಖಂಡಿತ ಅದನ್ನು ಪಡೆಯುತ್ತೇವೆ. ಜನವರಿ 22ರಂದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸಲು ಪ್ರತಿ ಮನೆಗೆ ಐದು ದೀಪಗಳನ್ನು ಕಳುಹಿಸುತ್ತಿದ್ದೇವೆ" ಎಂದು ಶಾರದಾ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net