ಸೋತರೂ ಪಾಯಿಂಟ್ಸ್ ಟೇಬಲ್‌ನಲ್ಲಿ 'ಕಿಂಗ್' ಪಂಜಾಬ್: ಪ್ರೀತಿ ಜಿಂಟಾ ಮೊದಲ ರಿಯಾಕ್ಷನ್​! | Preity Zinta

Preity Zinta
Preity Zinta
Published on
ಮುಲ್ಲನ್‌ಪುರ: ಐಪಿಎಲ್ 2026ರ ಆವೃತ್ತಿಯಲ್ಲಿ ಸತತ ಗೆಲುವುಗಳೊಂದಿಗೆ ಬೀಗುತ್ತಿದ್ದ ಪಂಜಾಬ್ ಕಿಂಗ್ಸ್ (PBKS) ತಂಡಕ್ಕೆ ಕೊನೆಗೂ ಸೋಲಿನ ರುಚಿ ದಕ್ಕಿದೆ. ಮಂಗಳವಾರ ಮುಲ್ಲನ್‌ಪುರದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲೊಪ್ಪಿಕೊಂಡಿದೆ. ಆದರೆ, ಈ ಮೊದಲ ಸೋಲಿನ ನಡುವೆಯೂ ತಂಡದ ಸಹ-ಮಾಲೀಕಿ, ಬಾಲಿವುಡ್ ನಟಿ ಪ್ರೀತಿ ಜಿಂಟಾ(Preity Zinta) ಮಾತ್ರ ಅತೀವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೋತರೂ ಅಗ್ರಸ್ಥಾನದಲ್ಲೇ ಪಂಜಾಬ್‌!

ತಂಡದ ಸೋಲಿನ ಕುರಿತು ಸಾಮಾಜಿಕ ಜಾಲತಾಣ 'X' (ಟ್ವಿಟರ್) ನಲ್ಲಿ ಪ್ರತಿಕ್ರಿಯಿಸಿರುವ ಪ್ರೀತಿ ಜಿಂಟಾ, ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳದೆ ತಂಡದ ಒಟ್ಟಾರೆ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ. "ಮುಲ್ಲನ್‌ಪುರದ ನಮ್ಮ ತವರು ಮೈದಾನದಲ್ಲಿ ನಡೆದ ಕೊನೆಯ ಪಂದ್ಯ ನಾವು ಅಂದುಕೊಂಡಂತೆ ನಡೆಯಲಿಲ್ಲ. ಆದರೆ 'ಕೋಯಿ ನಾ' (ಪರವಾಗಿಲ್ಲ), ಮುಂದೆ ನಮಗೆ ಇನ್ನೂ ಹೆಚ್ಚಿನ ಪಂದ್ಯಗಳಿವೆ" ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು ಮಾತನಾಡಿದ ಅವರು, "ನಮ್ಮ 'ಶೇರ್ ಸ್ಕ್ವಾಡ್' (Sher Squad) ಅತ್ಯದ್ಭುತ ಪ್ರದರ್ಶನ ನೀಡಿದೆ. ಟೂರ್ನಿಯ ಅರ್ಧ ಹಾದಿ ಮುಗಿದಿದ್ದರೂ ನಾವು ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದ್ದೇವೆ ಎಂಬುದು ನನಗೆ ತುಂಬಾ ಸಂತೋಷ ತಂದಿದೆ" ಎಂದಿದ್ದಾರೆ. ಮುಲ್ಲನ್‌ಪುರದ ಪಂದ್ಯಗಳ ಬಳಿಕ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡವು ತನ್ನ ಮುಂದಿನ ತವರು ಪಂದ್ಯಗಳನ್ನು ಧರ್ಮಶಾಲಾದಲ್ಲಿ ಆಡಲಿದೆ.

ಅಭಿಮಾನಿಗಳಿಗೆ ಧನ್ಯವಾದ: 'ಬಸ್ ಜೀತ್ನಾ ಹೈ'

ತನ್ನ ತಂಡದ ಅಭಿಮಾನಿಗಳ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ಜಿಂಟಾ, ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಅಭಿಮಾನಿಗಳು ನೀಡುತ್ತಿರುವ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. "ನಮ್ಮ ಪ್ರತಿಯೊಬ್ಬ ಅಭಿಮಾನಿಗೂ ಧನ್ಯವಾದ ಹೇಳಲು ಈ ಅವಕಾಶ ಬಳಸಿಕೊಳ್ಳುತ್ತಿದ್ದೇನೆ. ಐಪಿಎಲ್ 2026 ಅನ್ನು ನಿಮಗೆ ಸ್ಮರಣೀಯವಾಗಿಸುವುದೇ ನಮ್ಮ ಗುರಿ. ಅದಕ್ಕಾಗಿಯೇ ಹೇಳುವುದು- ಬಸ್ ಜೀತ್ನಾ ಹೈ (ಗೆಲ್ಲುವುದಷ್ಟೇ ಗುರಿ)" ಎಂದು ಅವರು ಅಭಿಮಾನಿಗಳಲ್ಲಿ ಸ್ಫೂರ್ತಿ ತುಂಬಿದ್ದಾರೆ.

26 ವರ್ಷ ಹಳೆಯ ಕೆಂಪು ದುಪಟ್ಟಾ ಮತ್ತು 'ಫುಲ್ಕರಿ' ಕಲೆ!

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪ್ರೀತಿ ಜಿಂಟಾ ಧರಿಸಿದ್ದ ಕೆಂಪು ಬಣ್ಣದ ದುಪಟ್ಟಾ ಎಲ್ಲರ ಗಮನ ಸೆಳೆದಿತ್ತು. ಇದರ ಹಿಂದಿನ ವಿಶೇಷ ಕಾರಣವನ್ನು ಅವರು ಬಹಿರಂಗಪಡಿಸಿದ್ದಾರೆ. "ನಾನು ಧರಿಸಿರುವ ಈ ಕೆಂಪು 'ಫುಲ್ಕರಿ ದುಪಟ್ಟಾ' (Phulkari Dupatta) ಬರೋಬ್ಬರಿ 26 ವರ್ಷ ಹಳೆಯದ್ದು. ಒಬ್ಬ ಪಂಜಾಬಿ ಅಭಿಮಾನಿ ಇದನ್ನು ನನಗೆ ಉಡುಗೊರೆಯಾಗಿ ನೀಡಿ, ಪಂದ್ಯದ ವೇಳೆ ಧರಿಸುವಂತೆ ವಿನಂತಿಸಿದ್ದರು. ಅವರ ನೆನಪಿನ ಸವಿಯಾದ ಈ ಉಡುಪನ್ನು ಧರಿಸಿರುವುದು ನನಗೂ ಖುಷಿ ತಂದಿದೆ" ಎಂದಿದ್ದಾರೆ.
ಅಳಿವಿನ ಅಂಚಿನಲ್ಲಿರುವ ಪಂಜಾಬ್‌ನ ಸಾಂಪ್ರದಾಯಿಕ 'ಫುಲ್ಕರಿ' ಕರಕುಶಲ ಕಲೆಯನ್ನು ಉತ್ತೇಜಿಸುವುದು ತಮ್ಮ ಉದ್ದೇಶ ಎಂದು ಅವರು ತಿಳಿಸಿದ್ದಾರೆ. "ಫುಲ್ಕರಿ ಒಂದು ಸುಂದರವಾದ ಜಾನಪದ ಕಲೆ. ಸ್ಥಳೀಯ ಕಲಾವಿದರನ್ನು ಬೆಂಬಲಿಸಲು ಮತ್ತು ಈ ಪರಂಪರೆಯನ್ನು ಪುನರುಜ್ಜೀವನಗೊಳಿಸಲು ನಾನು ಇಂತಹ ಉಡುಪುಗಳನ್ನು ಕ್ರಿಕೆಟ್ ಪಂದ್ಯಗಳ ವೇಳೆ ಧರಿಸಲು ಬಯಸುತ್ತೇನೆ. ನಮ್ಮ ಮೂಲ ಮತ್ತು ಅಸ್ಮಿತೆಯ ಬಗ್ಗೆ ನಾವು ಯಾವಾಗಲೂ ಹೆಮ್ಮೆ ಪಡಬೇಕು" ಎಂದು ಜಿಂಟಾ ಹೇಳಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net