

ಚಿಕ್ಕಬಳ್ಳಾಪುರ: ಸಂಗೀತ ಲೋಕದ ಸಾಮ್ರಾಟ್, ಮದ್ರಾಸಿನ ಮೊಸಾರ್ಟ್ ಎಂದೇ ಖ್ಯಾತಿ ಪಡೆದ, ಪದ್ಮಭೂಷಣ, ಆಸ್ಕರ್ ಮತ್ತು ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಎ ಆರ್. ರೆಹಮಾನ್ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿ ಗಾಯನ ಮೂಲಕ ಗಮನ ಸೆಳೆದರು. ಸದ್ಗುರು ಶ್ರೀ ಮಧುಸೂದನ ಸಾಯಿಯವರ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಸೇವಾ ಅಭಿಯಾನದ ಗಮನಾರ್ಹ ಸಾಧನೆಗಳನ್ನು ಕಣ್ತುಂಬಿಕೊಂಡರು. ಸದ್ಗುರು ಶ್ರೀ ಮಧುಸೂದನ ಸಾಯಿಯವರ ಮಾರ್ಗದರ್ಶನದಡಿ 2014ರಲ್ಲಿ ಸ್ಥಾಪಿಸಲಾದ ಸಾಯಿ ಸಿಂಫೋನಿ ಸ್ವರಮೇಳದ ವಿದ್ಯಾರ್ಥಿಗಳು ಅಮೋಘವಾದ ಪಾಶ್ಚಿಮಾತ್ಯ ಸಂಗೀತ ಪ್ರದರ್ಶನವನ್ನು ನೀಡಿದರು.
ಸಾಯಿ ಸಿಂಫೋನಿ ಸ್ವರಮೇಳವು (ಆರ್ಕೆಸ್ಟ್ರಾ), ದೇಶದಲ್ಲೇ ಅತಿ ದೊಡ್ಡ ಸ್ವರಮೇಳವಾಗಿ ಬೆಳೆದಿದ್ದು, 170 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಈ ವಿದ್ಯಾರ್ಥಿಗಳು ಶ್ರೀ ಸತ್ಯಸಾಯಿ ಲೋಕ ಸೇವಾ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದು, ಬಹುತೇಕರು ಗ್ರಾಮೀಣ ಭಾಗದಿಂದ ಬಂದಿದ್ದಾರೆ. ಇವರಿಗೆ ಅದ್ಭುತವಾದ ವಿಶೇಷ ಸಂಗೀತ ವಾದ್ಯಗಳು, ಉಪಕರಣಗಳು ಮತ್ತು ಸಂಗೀತ ಶಿಕ್ಷಣವನ್ನು ನೀಡುವ ಮೂಲಕ, ಸ್ವರಮೇಳದ ಖ್ಯಾತಿ ಜಗತ್ತಿನಾದ್ಯಂತ ಪಸರಿಸಿದೆ.
ಇತ್ತೀಚೆಗೆ ನಡೆದ ಸಂಗೀತ ರಸಸಂಜೆಯಲ್ಲಿ ಪಾಶ್ಚಿಮಾತ್ಯ ಸಂಗೀತದ ಪಿತಾಮಹಾ ಬೀಥೋವನ್ ಅವರ 5ನೇ ಸಿಂಫನಿ, ಪೈರೇಟ್ಸ್ ಆಫ್ ಕೆರಿಬಿಯನ್, ಮಿಷನ್ ಇಂಪಾಸಿಬಲ್ ಮತ್ತು ಹಲವಾರು ಇತರ ಸಂಗೀತದ ಮೇರುಕೃತಿಗಳನ್ನು ಅತ್ಯದ್ಭುತವಾಗಿ ನುಡಿಸಲಾಯಿತು.
ಈ ಸ್ವರಮೇಳದ ಗುರುಗಳು, ಗ್ರೀಕ್-ಅಮೇರಿಕನ್ ಬಹು-ವಾದಕ ಶ್ರೀ ಡಿಮಿಟ್ರಿಸ್ ಲ್ಯಾಂಬ್ರಿಯಾನೋಸ್ ಅವರಿಂದ ತರಬೇತಿ ಪಡೆದ ಸಾಯಿ ಸಿಂಫನಿ ಆರ್ಕೆಸ್ಟ್ರಾ, ವಿವಿಧ ಕಾಲಮಾನಗಳಲ್ಲಿ ಸುಪ್ರಸಿದ್ಧವಾದ ಸಂಗೀತದ ಮೇರುಕೃತಿಗಳನ್ನು ನುಡಿಸುವ ಮೂಲಕ ಸುಶ್ರಾವ್ಯ ಪ್ರದರ್ಶನ ನೀಡಿದರು.
ಇದೇ ಸಮಯದಲ್ಲಿ, ಸಭೆಯನ್ನು ಉದ್ದೇಶಿಸಿ ಮಾತಾನಾಡಿದ ರೆಹಮಾನ್ ಅವರು, “ತಾವು ನೋಡಿದ ಅತ್ಯಂತ ಯುವ ಸಂಗೀತ ಸಮೂಹಗಳಲ್ಲಿ, ಸಾಯಿ ಸಿಂಫೋನಿ ಆರ್ಕೆಸ್ಟ್ರಾ ಅತ್ಯಂತ ಉತ್ಸಾಹಭರಿತ ಮತ್ತು ಮನೋರಂಜಕವಾದದ್ದು” ಎಂದು ತಿಳಿಸಿದರು. ವಿದ್ಯಾರ್ಥಿಗಳು ವಿಶ್ವ ದರ್ಜೆಯ ವಾದ್ಯಗಳೊಂದಿಗೆ, ಜಾಗತಿಕ ವೇದಿಕೆಗಳಲ್ಲಿ ತಮ್ಮ ಸಂಗೀತದ ಕುಶಾಗ್ರಮತಿತನವನ್ನು ಪ್ರದರ್ಶಿಸಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಸೇವಾ ಅಭಿಯಾನ ಮತ್ತು ಅದರ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿರನ್ನು ಶ್ಲಾಘಿಸಿದರು.