ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯುವ ದಿನ ಲಾಕ್​ಡೌನ್​..! ಹೀಗಂತ ಮಾಜಿ ಶಿಕ್ಷಣ ಸಚಿವರು ಹೇಳಿದ್ದೇಕೆ?

kimmane rathnakar (1)
Published on

ಶಿವಮೊಗ್ಗ: ಕರೊನಾ ಮುಕ್ತ ಪ್ರದೇಶದಲ್ಲಿ ಶಾಲೆಗಳನ್ನು ಆರಂಭಿಸುವುದು, ಸೋಂಕು ಇರುವ ಭಾಗದಲ್ಲಿ ನಂತರ ಶಾಲೆಗಳನ್ನು ತೆರೆಯುವ ನಿರ್ಧಾರ ಮೂರ್ಖತನ ಎಂದಿರುವ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್​ ಅವರು ಪ್ರಸಕ್ತ ಶೈಕ್ಷಣಿಕ ವರ್ಷವನ್ನು ನಿಭಾಯಿಸಲು ಇರುವ ಹಲವು ಮಾರ್ಗಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲೇಬೇಕು ಎಂದ ಅವರು ಆ ದಿನ ಏನು ಮಾಡಿದರೆ ಬೆಸ್ಟ್​ ಎಂಬ ಸಲಹೆಯನ್ನೂ ಕೊಟ್ಟಿದ್ದಾರೆ.

ನಗರದಲ್ಲಿ ಗುರುವಾರ ಪ್ರೆಸ್ಟ್​ ಟ್ರಸ್ಟ್​ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್​, ಸ್ವಲ್ಪ ತಡವಾದರೂ ಪರವಾಗಿಲ್ಲ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ನಡೆಸಲೇಬೇಕು. ಪರೀಕ್ಷೆಯೇ ಇಲ್ಲದ ಶಿಕ್ಷಣ ವ್ಯರ್ಥ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಬೇಕಿದ್ದರೆ ಪರೀಕ್ಷೆ ದಿನಗಳಂದು ಬೆಳಗ್ಗೆ 7ರಿಂದ ಸಂಜೆ 4ರವರೆಗೆ ಲಾಕ್​ಡೌನ್​ ಘೋಷಿಸಿ ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಎದುರಿಸಲು ಅವಕಾಶ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಆಗಸ್ಟ್​ ನಂತರವೇ ಶಾಲೆಗಳನ್ನು ಆರಂಭಿಸುವುದು ಒಳಿತು ಎಂದ ಮಾಜಿ ಸಚಿವರು, ವಿವಿಧ ಜಯಂತಿಗಳೂ ಸೇರಿ ಅನೇಕ ಸರ್ಕಾರಿ ರಜೆಗಳಿವೆ. ಆ ದಿನಗಳಲ್ಲಿ ಶಾಲೆಗಳನ್ನು ನಡೆಸಬಹುದು. ಪಠ್ಯಕ್ರಮ ಕಡಿತದಂತಹ ಅನೇಕ ಮಾರ್ಗಗಳಿವೆ. ಹೀಗಾಗಿ ವಿದ್ಯಾರ್ಥಿಗಳು, ಪಾಲಕರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಮಾಜಿ ಸಚಿವರು ಹೇಳಿದರು.

ಆನ್​ಲೈನ್​ ಶಿಕ್ಷಣ ಬೇಡ ಎನ್ನುವುದಕ್ಕೆ ತಾಂತ್ರಿಕ, ಆರ್ಥಿಕ ಕಾರಣಗಳ ಜತೆಗೆ ಆರೋಗ್ಯದ ಕಾರಣವೂ ಇದೆ. ಆನ್​ಲೈನ್​ ಶಿಕ್ಷಣ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ತಜ್ಞ ವೈದ್ಯರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವಸರದ ನಿರ್ಧಾರ ಕೈಗೊಳ್ಳುವ ಅವಶ್ಯಕತೆಯಿಲ್ಲ ಎಂದು ಹೇಳಿದರು.

ಖಾಸಗಿ ಶಾಲೆ ನಿಯಂತ್ರಣಕ್ಕೆ ಸಕಾಲ: ಕರೊನಾ ಸಂದರ್ಭದಲ್ಲಿ ಅನೇಕ ಕಾನೂನುಗಳನ್ನು ಬಿಗಿಗೊಳಿಸಲಾಗಿದೆ. ಹೀಗಾಗಿ ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದು, ಬಲವಂತವಾಗಿ ಈ ವರ್ಷದ ಶುಲ್ಕ ಕಟ್ಟಿಸಿಕೊಳ್ಳುವುದನ್ನು ತಡೆಯಲು ಸರ್ಕಾರದ ಬಳಿ ಅವಕಾಶಗಳಿವೆ. ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ಇದು ಸಕಾಲ ಎಂದು ಕಿಮ್ಮನೆ ರತ್ನಾಕರ್​ ಹೇಳಿದರು.

ಶಿಕ್ಷಣ ಸಚಿವ ಎಸ್​.ಸುರೇಶ್​ ಕುಮಾರ್​ ಸಮರ್ಥರಿದ್ದಾರೆ. ಶಿಕ್ಷಣ ಇಲಾಖೆಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಅಧ್ಯಯನ ಶೀಲರೂ ಹೌದು. ಬೇರೆಯವರ ಅನಿಸಿಕೆಗಳನ್ನೂ ಕೇಳುವ ವ್ಯವಧಾನ ಅವರಿಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸರಿಯಾದ ರೀತಿಯಲ್ಲಿ ನಡೆಸುತ್ತಾರೆಂಬ ವಿಶ್ವಾಸವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net