

ಬೆಂಗಳೂರು: ಹಿಂದು ಮುಖಂಡರ ಹತ್ಯೆಗೈದು ಭಯೋತ್ಪಾದನೆ, ಕೋಮುದ್ವೇಷ ಮತ್ತು ಅಶಾಂತಿ ಸೃಷ್ಟಿಸಲು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ (ಪಿಎಫ್ಐ) ‘ಸರ್ವೀಸ್ ಟೀಂ ಅಥವಾ ಕಿಲ್ಲರ್ ಸ್ಕಾ್ವಡ್’ಗಳ ಹೆಸರಲ್ಲಿ ರಹಸ್ಯ ತಂಡಗಳನ್ನು ರಚಿಸಲಾಗಿತ್ತು ಎಂಬುದು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ತನಿಖೆಯಲ್ಲಿ ಬಹಿರಂಗವಾಗಿದೆ. ಜನರಲ್ಲಿ ಭಯ ಹುಟ್ಟಿಸಲೆಂದೇ ಶಂಕಿತ ಉಗ್ರರಿಗೆ ಶಸ್ತ್ರಾಸ್ತ್ರಗಳ ಬಳಕೆ ಹಾಗೂ ಹತ್ಯಾದಾಳಿ ಕುರಿತು ತರಬೇತಿ ನೀಡಲಾಗಿತ್ತು ಎಂಬ ಸಂಗತಿಯೂ ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಫ್ಐನ 20 ಶಂಕಿತ ಉಗ್ರರ ವಿರುದ್ಧ ಎನ್ಐಎ ಕೋರ್ಟ್ಗೆ 1,500 ಪುಟಗಳ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಇಸ್ಲಾಂ ಸಮುದಾಯದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗುತ್ತಿದೆ. ಅದನ್ನು ಹೋಗಲಾಡಿಸಲು ಸಮಾಜದಲ್ಲಿ ಭಯೋತ್ಪಾದನೆ, ಕೋಮುದ್ವೇಷ ಮತ್ತು ಅಶಾಂತಿ ಉಂಟು ಮಾಡಬೇಕಿದೆ ಎಂದು ಪಿಎಫ್ಐನ ಉದ್ದೇಶದಂತೆ ಕಾರ್ಯಸೂಚಿ ರಚಿಸಲಾಗಿತ್ತು. ಕೆಲ ನಿರ್ದಿಷ್ಟ ಸಮುದಾಯ ಹಾಗೂ ಗುಂಪುಗಳ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಅನ್ಯ ಕೋಮಿನ ವ್ಯಕ್ತಿಗಳನ್ನು ಗುರುತಿಸಿ, ಅವರ ಪಟ್ಟಿ ಸಿದ್ಧಪಡಿಸುವುದು ಹಾಗೂ ಅವರ ಚಲನವಲನಗಳ ಮೇಲೆ ನಿಗಾವಹಿಸಲು ರಹಸ್ಯ ತಂಡಗಳನ್ನು ರಚಿಸಲಾಗಿತ್ತು. ಪಿಎಫ್ಐ ನಾಯಕರ ಸೂಚನೆ ಅನ್ವಯ ಗುರುತಿಸಿದ ವ್ಯಕ್ತಿಗಳ ಹತ್ಯೆ ಮಾಡಲು ತಂಡದ ಆಯ್ದ ಸದಸ್ಯರಿಗೆ ಶಸ್ತ್ರಾಸ್ತ್ರಗಳ ಬಳಕೆ ಹಾಗೂ ದಾಳಿಯ ಬಗ್ಗೆ ತರಬೇತಿ ನೀಡಲಾಗಿತ್ತು ಎಂದು ಚಾರ್ಜ್ಶೀಟ್ನಲ್ಲಿ ನಮೂದಿಸಲಾಗಿದೆ.
ಅಲ್ ಖೈದಾ ಸಂಪರ್ಕ: ಜಾಗತಿಕ ಉಗ್ರ ಸಂಘಟನೆ ಅಲ್ ಖೈದಾ ಜತೆ ಸಂಪರ್ಕ ಹೊಂದಿದ್ದ ಬೆಂಗಳೂರಿನ ತಿಲಕನಗರದ ಬಿಟಿಎಂ ಲೇಔಟ್ನಲ್ಲಿ ಸೆರೆಸಿಕ್ಕ ಅಖ್ತರ್ ಹುಸೇನ್ ಮತ್ತು ತಮಿಳುನಾಡಿನ ಸೇಲಮ್ಲ್ಲಿ ಬಂಧಿತ ಅಬ್ದುಲ್ ಮಂಡಲ್ ಅಲಿಯಾಸ್ ಜುಬಾ ವಿರುದ್ಧವೂ ಎನ್ಐಎ ಆರೋಪಪಟ್ಟಿ ಸಲ್ಲಿಸಿದೆ. ಅಲ್ಖೈದಾ ಸಂಘಟನೆ ಸೇರ್ಪಡೆಗೆ ಅಖ್ತರ್ ಮತ್ತು ಅಬ್ದುಲ್ ಅಫ್ಘಾನಿಸ್ತಾನಕ್ಕೆ ತೆರಳಲು ಸಜ್ಜಾಗಿದ್ದರು. ಇದಕ್ಕಾಗಿ ಅಲ್ಖೈದಾ ಉಗ್ರರ ಜತೆ ಜಾಲತಾಣದಲ್ಲಿ ಸಂಪರ್ಕ ಹೊಂದಿದ್ದ ಶಂಕಿತರು ಚಾಟ್, ಪೋಸ್ಟ್ ಮಾಡುತ್ತಿದ್ದರು. ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲೆ ದೌರ್ಜನ್ಯ ನಡೆಯುತ್ತಿದೆ. ಜಿಹಾದ್ನಲ್ಲಿ (ಧರ್ಮಯುದ್ಧ) ಭಾಗಿಯಾಗಬೇಕೆಂದು ಯುವಕರನ್ನು ಹುರಿದುಂಬಿಸುತಿದ್ದರು. ಬಂಧಿತ ಶಂಕಿತರ ಜತೆಗೆ ಕೋಲ್ಕತ್ತಾದ ಮತ್ತೊಬ್ಬ, ಬಾಂಗ್ಲಾದ ಒಬ್ಬಾತ ಅಫ್ಪಾನಿಸ್ತಾನಕ್ಕೆ ಹೋಗಿ ಅಲ್ಖೈದಾ ಸದಸ್ಯರನ್ನು ಸಂರ್ಪಸಲು ಪ್ರಯತ್ನಿಸಿದ್ದರು ಎಂಬುದು ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪಿಎಫ್ಐ ಆಸ್ತಿ ಜಪ್ತಿಗೆ ಹೈ ತೀರ್ಪು: ಕಾಸರಗೋಡು ಹರತಾಳ ಸಂದರ್ಭ ಉಂಟಾದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ನಷ್ಟವನ್ನು ಪಿಎಫ್ಐನಿಂದಲೇ ವಸೂಲು ಮಾಡುವಂತೆ ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಐವರು ಸೇರಿ ರಾಜ್ಯದ 197 ಪಿಎಫ್ಐ ಮುಖಂಡರ ಆಸ್ತಿ ಮುಟ್ಟುಗೋಲು ಹಾಕಲು ರಾಜ್ಯ ಸರ್ಕಾರ ತೀರ್ವನಿಸಿದೆ. ಪೆರುಂಬಳ ಎಂಬಲ್ಲಿರುವ ಪಿಎಫ್ಐ ಜಿಲ್ಲಾ ಕಚೇರಿಸಹಿತ ಚಂದ್ರಗಿರಿ ಚಾರಿಟಬಲ್ ಟ್ರಸ್ಟ್ ಜಾಗವೂ ಸೇರಿ ಇತರ ಕೆಲವು ಜಾಗಗಳನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಕ್ರಮ ಕೈಗೊಂಡಿದೆ. ಜಿಲ್ಲೆಯ ಪಿಎಫ್ಐ ಮುಖಂಡರಾದ ಮೀಂಜದ ಮಹಮ್ಮದಾಲಿ, ನಾಯನ್ಮಾರ ಮೂಲೆಯ ಎನ್.ಯು. ಅಬ್ದುಲ್ ಸಲಾಂ, ಆಲಂಪಾಡಿಯ ಉಮ್ಮರ್ ಫಾರೂಕ್, ಹೊಸದುರ್ಗದ ಸಿರಾಜುದ್ದೀನ್, ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ತೃಕ್ಕರಿಪುರದ ಸಿ.ಟಿ. ಸುಲೈಮಾನ್ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ಮುಂದಾಗಿದೆ. ಪಿಎಫ್ಐ 2022 ಸೆ. 22ರಂದು ಕೇರಳಾದ್ಯಂತ ನಡೆಸಿದ್ದ ಹರತಾಳದಲ್ಲಿ 5.20 ಕೋಟಿ ರೂ. ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟಾಗಿದ್ದ ಬಗ್ಗೆ ಪೊಲೀಸರು ಹೈಕೋರ್ಟ್ಗೆ ವರದಿ ಸಲ್ಲಿಸಿದ್ದರು.
ಇಸ್ಲಾಮಿಕ್ ಆಳ್ವಿಕೆ ಗುರಿ: ಇಸ್ಲಾಂ ಸಮುದಾಯದ ವಿರುದ್ಧ ಒಂದಿಲ್ಲೊಂದು ಅಭಿಯಾನ ಮಾಡುತ್ತ ಸಮುದಾಯವರನ್ನು ಕಡೆಗಣಿಸಲಾಗುತ್ತಿದೆ. ಈ ಕಾರಣಕ್ಕೆ ಉಗ್ರ ಸಂಘಟನೆಗಳ ಸದಸ್ಯರು 2047ರ ವೇಳೆಗೆ ಇಡೀ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆ ತರಲು, ಈಗಿನಿಂದಲೇ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಿಂದು ಕಾರ್ಯಕರ್ತರು ಹಾಗೂ ಮುಖಂಡರ ಪಟ್ಟಿ ಮಾಡಿ, ಹಂತಹಂತವಾಗಿ ಹತ್ಯೆಗೈಯಲು ಸಂಚು ರೂಪಿಸಿದ್ದರು.
ಗಣರಾಜ್ಯೋತ್ಸವಕ್ಕೆ ಅಲರ್ಟ್: ಗಣರಾಜ್ಯೋತ್ಸವ ಸಂದರ್ಭದಲ್ಲಿ ಉಗ್ರರ ಕರಿನೆರಳು ಬೀಳುವ ಸಾಧ್ಯತೆ ಇರುವುದರಿಂದ ಪೊಲೀಸರು ಹೈ ಅಲರ್ಟ್ ಆಗಿದ್ದು, ರಾಜ್ಯಾದ್ಯಂತ ಹದ್ದಿನ ಕಣ್ಣಿಟ್ಟಿದ್ದಾರೆ. ಜತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಗಣತಂತ್ರದ ದಿನಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನಿಗಾಕ್ಕೆ ಪೊಲೀಸರು ಸನ್ನದ್ಧರಾಗಿದ್ದಾರೆ.
ಉಗ್ರರ ತಲೆಗೆ ಬಹುಮಾನ: ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಪಿಎಫ್ಐ ಕೈವಾಡವಿದ್ದ ಹಿನ್ನೆಲೆಯಲ್ಲಿ ಆ.4ರಂದು ಎನ್ಐಎ ಪ್ರಕರಣ ದಾಖಲಿಸಿಕೊಂಡು ಮೊಹಮ್ಮದ್ ಶಿಯಾಬ್, ಅಬ್ದುಲ್ ಬಶೀರ್, ರಿಯಾಜ್, ನೌಫಲ್, ಇಸ್ಮಾಯಿಲ್ ಶಫಿ, ಮೊಹಮ್ಮದ್ ಇಕ್ಬಾಲ್, ಶಹೀದ್, ಮೊಹಮ್ಮದ್ ಶಫೀಕ್, ಅಬ್ದುಲ್ ಕಬೀರ್, ಮೊಹಮ್ಮದ್ ಇಬ್ರಾಹಿಂ, ಸೈನುಲ್ ಅಬೀದ್, ಶೇಖ್ ಸದ್ದಾಂ ಹುಸೇನ್, ಜಾಕಿಯಾರ್, ಅಬ್ದುಲ್ ಹ್ಯಾರೀಸ್ನನ್ನು ಬಂಧಿಸಿದೆ. ಸುಳ್ಯದ ಮುಸ್ತಫಾ ಪೈಚಾರ್, ಅಬೂಬಕ್ಕರ್ ಸಿದ್ದಿಕ್, ಉಮ್ಮಾರ್ ಫಾರೂಕ್, ಬಂಟ್ವಾಳದ ಕೆ.ಎ. ಮಸೂದ್, ಕೊಡಾಜೆ ಮೊಹಮ್ಮದ್ ಶರೀಫ್, ಮಡಿಕೇರಿಯ ತುಫೈಲ್ ತಲೆಮರೆಸಿಕೊಂಡಿದ್ದಾರೆ. ಇವರ ಬಗ್ಗೆ ಮಾಹಿತಿ ಕೊಟ್ಟವರಿಗೆ ನಗದು ಬಹುಮಾನ ಕೊಡುವುದಾಗಿ ಎನ್ಐಎ ಘೋಷಿಸಿದೆ.
ನಾಲ್ವರ ಹತ್ಯೆಗೆ ಪಟ್ಟಿ, ಸಂಚಿಗೆ 3 ಕಡೆ ಸಭೆ: ಬೆಂಗಳೂರು, ಸುಳ್ಯ ಟೌನ್ ಹಾಗೂ ಬೆಳ್ಳಾರೆ ಗ್ರಾಮದಲ್ಲಿ ಪಿಎಫ್ಐ ಸದಸ್ಯರು ಮತ್ತು ಮುಖಂಡರ ಸಭೆ ನಡೆದಿತ್ತು. ಈ ಸಭೆಯಲ್ಲಿ ಜಿಲ್ಲಾ ಕಿಲ್ಲರ್ ಸ್ಕಾ್ವಡ್ನ ಮುಖ್ಯಸ್ಥ ಮುಸ್ತಫಾ ಪೈಚಾರ್ ಭಾಗಿಯಾಗಿದ್ದ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮುಖಂಡನನ್ನು ಗುರುತಿಸಲು ಸೂಚಿಸಲಾಗಿತ್ತು. ಅದರಂತೆ ಮುಸ್ತಫಾ ಮತ್ತವನ ತಂಡ ನಾಲ್ವರು ಮುಖಂಡರ ಪಟ್ಟಿ ಸಿದ್ಧಪಡಿಸಿದ್ದರು. ಆ ಪಟ್ಟಿಯಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಹೆಸರಿತ್ತು. ಉಗ್ರ ನಾಯಕರ ನಿರ್ದೇಶನದಂತೆ 2022ರ ಜುಲೈ 26ರಂದು ಸಾರ್ವಜನಿಕವಾಗಿ ಪ್ರವೀಣ್ನನ್ನು ಹತ್ಯೆ ಮಾಡಲಾಗಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.