ಅಪಹರಣ ನಾಟಕ ತಂದೆ ಬಳಿ 90 ಲಕ್ಷ ರೂ.ಎಗರಿಸಲು ಪುತ್ರನ ಸಂಚು, ಮೂವರ ಬಂಧನ

ಸ್ನೇಹಿತರಿಂದ ಕೊಲೆ ಬೆದರಿಕೆ ಕರೆ,
ಮನೀಷ್ ಹಾಗೂ ಆತನ ಸ್ನೇಹಿತರು
ಮನೀಷ್ ಹಾಗೂ ಆತನ ಸ್ನೇಹಿತರು
Published on: 

ಬೆಂಗಳೂರು: ಸ್ನೇಹಿತರೊಂದಿಗೆ ಸೇರಿ ತಂದೆ ಬಳಿ ಇದ್ದ ಲಕ್ಷಾಂತರ ರೂ.ಕಿತ್ತುಕೊಳ್ಳುವ ಉದ್ದೇಶದಿಂದ ಸ್ವಂತ ಮಗನೇ ಅಪಹರಣವಾಗಿರುವ ನಾಟಕವಾಡಿ ಪೊಲೀಸರ ಅತಿಥಿಯಾಗಿದ್ದಾನೆ.

ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ 62 ವರ್ಷದ ಮನೋಹರ್ ಪಟೇಲ್ ಎಂಬುವವರು ನೀಡಿದ್ದ ದೂರಿನ ಅನ್ವಯ ತನಿಖೆ ನಡೆಸಿದಾಗ ಪುತ್ರನ ಸಂಚು ಬಯಲಾಗಿದೆ. ಅಪಹರಣದ ನಾಟಕವಾಡಿ, 90 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮನೀಷ್ ಪಟೇಲ್ ಹಾಗೂ ಆತನ ಇಬ್ಬರು ಸಹಚರರನನ್ನು ಬಂಧಿಸಲಾಗಿದೆ.

ಗದಗದಲ್ಲಿ ಹಣದ ವ್ಯವಹಾರವಿದೆ ಎಂದು ತಂದೆಗೆ ತಿಳಿಸಿದ್ದ ಮನೀಷ್, ಸೆಪ್ಟೆಂಬರ್ 28ರಂದು ಮನೆಯಿಂದ ತೆರಳಿದ್ದ. ಆದರೆ, ಮರುದಿನ ದಿನ ಬೆಳಗ್ಗೆ 8ಗಂಟೆಗೆ ಮನೀಷ್‌ನ ಮೊಬೈಲ್ ಸಂಖ್ಯೆಯಿಂದ ತಂದೆಯ ವಾಟ್ಸ್‌ಪ್‌ಗೆ ಕರೆ ಬಂದಿದೆ. ಫೋನ್‌ನಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿಗಳು, ನಿಮ್ಮ ಮಗನನ್ನು ಅಪಹರಣ ಮಾಡಿದ್ದೇವೆ, ತೊಂಬತ್ತು ಲಕ್ಷ ರೂ. ನೀಡದಿದ್ದರೆ ಆತನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ನಂತರ ಆರೋಪಿಗಳು ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡಿದ್ದಾರೆ. ಆತಂಕಗೊಂಡ ಮನೋಹರ್ ಪಟೇಲ್ ಪೊಲೀಸರಿಗೆ ದೂರು ನೀಡಿದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಮೊಬೈಲ್ ನಂಬರ್ ಟ್ರ್ಯಾಕ್ ಮಾಡಲು ಯತ್ನಿಸಿದಾಗ ಸ್ವಿಚ್‌ಆಫ್ ಆಗಿತ್ತು. ಆದರೆ, ಕೆಲ ಸಮಯದ ನಂತರ ಮತ್ತೆ ಅಪರಿಚಿತ ಸಂಖ್ಯೆಯಿಂದ ತಂದೆಗೆ ಕರೆ ಮಾಡಿ ಹಣ ರೆಡಿಯಾಗಿದೆಯಾ? ಎಂದು ವಿಚಾರಿಸಿದ್ದರು. ತಕ್ಷಣ ಜಾಗೃತರಾದ ಪೊಲೀಸರು ಕರೆಯನ್ನು ಟ್ರ್ಯಾಕ್ ಮಾಡಿ ಹಾಸನ ಭಾಗದಲ್ಲಿರುವ ಮಾಹಿತಿ ಲಭ್ಯವಾಗಿದೆ.

ಮೊಬೈಲ್ ಲೋಕೇಷನ್ ಆಧಾರದ ಮೇಲೆ ತೆರಳಿ ಮನೆಯೊಂದರ ಬಾಗಿಲು ತೆಗೆದು ನೋಡಿದಾಗ, ಮನೀಷ್ ಪಟೇಲ್ ಇಬ್ಬರು ವ್ಯಕ್ತಿಗಳ ಜತೆ ಕುಳಿತಿದ್ದರು. ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಪುತ್ರನೆ ಈ ಯೋಜನೆ ರೂಪಿಸಿ ತಂದೆಯ ಹಣ ಕಬಳಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ. ಸದ್ಯಆರೋಪಿಗಳನ್ನು ಬಂಧಿಸಿದ್ದು, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಎನ್.ಯತೀಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net