4 ಸಾವಿರ ರೂ. ವಾಪಸ್​ ಕೊಡದ್ದಕ್ಕೆ ಅಪಹರಿಸಿ ಕೊಂದೇ ಬಿಟ್ಟ.. ಮೋರಿಯಲ್ಲಿ ಸಿಕ್ತು ಶವ..

crime
Published on

ನವದೆಹಲಿ: ಆತ ಕೊಡಬೇಕಾಗಿದ್ದು ಬರೀ 4 ಸಾವಿರ ರೂಪಾಯಿ. ಆದರೆ ಅದನ್ನು ವಸೂಲಿ ಮಾಡಬೇಕಾದವ ಆತನನ್ನು ಅಪಹರಿಸಿದ್ದಲ್ಲದೆ, ಕೊಂದು ಶವವವನ್ನು ಮೋರಿಗೆ ಎಸೆದಿದ್ದ.

35 ವರ್ಷದ ವ್ಯಕ್ತಿ ಮಾಂಸದ ವ್ಯಾಪಾರಿಯೊಬ್ಬನಿಂದ ಹೀಗೆ ಕೊಲೆಗೀಡಾಗಿದ್ದು, ಇದೀಗ ಪೊಲೀಸರು ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ. ಜತೆಗೆ ಕಾರೊಂದನ್ನು ಕೂಡ ವಶಪಡಿಸಿಕೊಂಡಿದ್ದಾರೆ.

ದೆಹಲಿಯ ನರೇಲಾ ಇಂಡಸ್ಟ್ರಿಯಲ್​ ಏರಿಯಾದ ಇರ್ಷಾದ್ ಕೊಲೆಗೀಡಾಗಿದ್ದು, ಆತನ ಪತ್ನಿ ನೀಡಿದ್ದ ನಾಪತ್ತೆ ದೂರಿನ ಹಿನ್ನೆಲೆಯಲ್ಲಿ ಕ್ರಮಕೈಗೊಂಡ ದೆಹಲಿ ಕ್ರೈಂ ಬ್ರ್ಯಾಂಚ್​ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

ಸೆ. 2ರಿಂದ ಪತಿ ಕಾಣಿಸುತ್ತಿಲ್ಲ. ಅವರು ಕೊನೆಯದಾಗಿ ಭಾನು ಎಂಬವರೊಂದಿಗೆ ಇದ್ದಿದ್ದರು. ಆ ಬಳಿಕ ಅವರು ಮನೆಗೆ ಬಂದಿಲ್ಲ ಎಂದು ಇರ್ಷಾದ್ ಪತ್ನಿ ದೂರು ನೀಡಿದ್ದರು. ಕೊಲೆ ಮಾಡಿದ ಬಗ್ಗೆ ಸಂದೇಹ ಬರಬಾರದೆಂದು ಇರ್ಷಾದ್ ಪತ್ನಿಗೆ ಭಾನು ಸಹಾಯ ಮಾಡುವಂತೆ ನಾಟಕವಾಡಿದ್ದ. ಕೊನೆಗೂ ಪೊಲೀಸರ ತನಿಖೆಯಲ್ಲಿ ಸತ್ಯ ಹೇಳಿದ ಆತ ಕೃತ್ಯವೆಸಗಿದ್ದನ್ನು ಒಪ್ಪಿಕೊಂಡಿದ್ದಾನೆ.

ಮಾಂಸ ಖರೀದಿಸಿದ್ದ ಹಣವನ್ನು ಇರ್ಷಾದ್ ಕೊಡಬೇಕಿತ್ತು. ಪದೇಪದೆ ಕೇಳಿದ್ದರೂ ಕೊಡದ್ದರಿಂದ ಆತನನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು. ಶವವನ್ನು ಕಾರಿನಲ್ಲಿ ಕೊಂಡೊಯ್ದು ಹರಿಯಾಣದ ಸೋಣಿಪತ್ ಜಿಲ್ಲೆಯ ಹಲಾಲ್​ಪುರ ಗ್ರಾಮದಲ್ಲಿ ಮೋರಿಗೆ ಎಸೆಯಲಾಗಿತ್ತು ಎಂದು ತನಿಖೆ ವೇಳೆ ಭಾನು ಹೇಳಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net