

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಟರ್ಮಿನಲ್-2ರಲ್ಲಿ ಗುರುವಾರದಿಂದ (ಆ.31) ಆರಂಭವಾಗಬೇಕಿದ್ದ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯನ್ನು ಮುಂದೂಡಲಾಗಿದೆ.
ಹೊಸದಾಗಿ ಟರ್ಮಿನಲ್-2 ನಿರ್ಮಿಸಿದ ಬಳಿಕ ಹೆಚ್ಚಿನ ಸೇವೆಗಳೊಂದಿಗೆ ವಿಮಾನಗಳ ಕಾರ್ಯಾಚರಣೆಗೆ ಸಿದ್ಧತೆ ನಡೆಸಲಾಗಿತ್ತು. ಇದಕ್ಕಾಗಿ ವಾರ ಕಾಲದಿಂದ ಭರದ ಕೆಲಸವೂ ನಡೆದಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಈ ಸ್ಥಳಾಂತರ ಕಾರ್ಯವನ್ನು ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಗುರುವಾರವೇ ಪ್ರಕಟಿಸುವುದಾಗಿ ಬಿಐಎಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರಿಗೆ ಸೂಕ್ತ ಮತ್ತು ತಡೆರಹಿತ ಸ್ಥಿತ್ಯಂತರವನ್ನು ಒದಗಿಸುವ ಸಲುವಾಗಿ ಅಂತಿಮ ಸನ್ನದ್ಧತೆಯ ಪರಿಶೀಲನೆಯ ಸಮಯದಲ್ಲಿ ಕೊನೆಯ ನಿಮಿಷದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮುಂದಿನ ಸೂಚನೆ ಬರುವವರೆಗೆ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳು ಟರ್ಮಿನಲ್-1ರಲ್ಲಿಯೇ ಮುಂದುವರೆಯಲಿದೆ. ಈ ನಿರ್ಧಾರದಿಂದ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಹಾಗೂ ಪ್ರಯಾಣಿಕರಿಗೆ ಅತ್ಯುತ್ತಮವಾದ ಪ್ರಯಾಣದ ಅನುಭವ ನೀಡುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಮುಂದುವರೆಸಲಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಬಿಐಎಎಲ್ ಅಧಿಕಾರಿಗಳು ವಿನಂತಿಸಿದ್ದಾರೆ.