ಕಮರಿಹೋದ ಖೋಖೋ ಆಟಗಾರರ ಕನಸು; ಅನುದಾನ ಕೊರತೆಯಿಂದ ಎಂದ ಕುಲಪತಿ ವಿರುದ್ಧ ಆಕ್ರೋಶ

25-RNR-10
Published on

ಹಾವೇರಿ: ಅನುದಾನದ ಕೊರತೆ ಹಾಗೂ ವಿಶ್ವ ವಿದ್ಯಾಲಯದವರ ನಿರ್ಲಕ್ಷೃದಿಂದ ಹಾವೇರಿ ವಿಶ್ವ ವಿದ್ಯಾಲಯದ ಖೋಖೋ ತಂಡದ 15 ಕ್ರೀಡಾಪಟುಗಳು ದಕ್ಷಿಣ ವಲಯ ಅಂತರ ವಿಶ್ವ ವಿದ್ಯಾಲಯದ ಖೋಖೋ ಪಂದ್ಯಾವಳಿಯಿಂದ ವಂಚಿತರಾಗುವಂತಾಗಿದೆ.
ಡಿ. 5, 6ರಂದು ಸವಣೂರಿನ ಲಲಿತಾ ದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಹಾವೇರಿ ವಿಶ್ವವಿದ್ಯಾಲಯದ ಪುರುಷ ಮತ್ತು ಮಹಿಳೆಯರ ಅಂತರ ಮಹಾವಿದ್ಯಾಲಯಗಳ ಖೋಖೋ ಟೂರ್ನಿಯಲ್ಲಿ ಹಾವೇರಿ ವಿಶ್ವವಿದ್ಯಾಲಯದ ತಂಡ ಗೆಲುವು ಸಾಧಿಸಿ ಆಯ್ಕೆಯಾಗಿದೆ.
ಈ ತಂಡವು ಕೇರಳದ ಕ್ಯಾಲಿಕಟ್‌ನಲ್ಲಿ ಡಿ. 26ರಿಂದ 30ರವರೆಗೆ ನಡೆಯುವ ಎಐಯು (ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟಿ) ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಖೋಖೋ ಪುರುಷರ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬೇಕು. ಆದರೆ, ವಿದ್ಯಾರ್ಥಿಗಳನ್ನು ಕಳುಹಿಸಲು ವಿಶ್ವ ವಿದ್ಯಾಲಯದ ಕುಲಪತಿಗಳು ಅನುದಾನದ ಕೊರತೆ ಹೇಳಿ ಕಳುಹಿಸುತ್ತಿಲ್ಲ ಎಂದು ಕ್ರೀಡಾಪಟುಗಳು ಆರೋಪಿಸುತ್ತಿದ್ದಾರೆ.
ಕ್ರೀಡಾಪಟುಗಳು ತಮ್ಮ ಸಮಸ್ಯೆ ಕುರಿತು ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯರ ಶಾಸಕರಿಗೆ ಮನವಿ ಕೂಡ ಸಲ್ಲಿಸಿದ್ದಾರೆ. ಆದರೆ, ಈವರೆಗೂ ಯಾರೋಬ್ಬರು ಸ್ಪಂದಿಸಿಲ್ಲ ಎಂಬುದು ಕ್ರೀಡಾಪಟುಗಳ ಆರೋಪವಾಗಿದೆ.
ಹಣ ಕೊಡುವವರಿದ್ದರೂ ಕಳುಹಿಸುತ್ತಿಲ್ಲ…
ಕ್ರೀಡಾಪಟುಗಳು ತಮ್ಮ ಸಮಸ್ಯೆ ಕುರಿತು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಎದುರು ಹೇಳಿಕೊಂಡಿದ್ದಾರೆ. ಅವರು 50 ಸಾವಿರ ರೂ. ಕೊಡುವ ಭರವಸೆ ನೀಡಿದ್ದಾರೆ. ಇಷ್ಟು ಹಣದಲ್ಲಿ ಕ್ರೀಡಾಕೂಟಕ್ಕೆ ಹೋಗಿ ಬರಲು ಆಗುವುದಿಲ್ಲ. ಅಲ್ಲದೆ ಇನ್ನೂ ಕೆಲವರು ಸಹಾಯಧನ ನೀಡಲು ಸಿದ್ಧರಿದ್ದಾರೆ. ಆದರೆ, ವಿಶ್ವ ವಿದ್ಯಾಲಯದ ಕುಲಪತಿ ಕ್ರೀಡಾಕೂಟಕ್ಕೆ ತೆರಳಲು ಪರವಾನಗಿ ನೀಡುತ್ತಿಲ್ಲ. ತಂಡ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಸೋಲು ಕಂಡರೆ ವಿದ್ಯಾಲಯಕ್ಕೆ ಕೆಟ್ಟ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ‘ವಿಜಯವಾಣಿ’ಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net