

ಬೆಂಗಳೂರು: ಪಹಲ್ಗಾಮ್ ಘಟನೆ ಕುರಿತು ಚರ್ಚಿಸಲು ಕರೆದಿದ್ದ ಸರ್ವಪಕ್ಷ ಸಭೆಗೆ ಪ್ರಧಾನಿ ಮೋದಿ ಗೈರಾದ ಬಗ್ಗೆ (Kharge objects to Modi's absence from all-party meeting) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೆ.ಜೆ.ಹಳ್ಳಿಯ ಅಂಬೇಡ್ಕರ್ ಮೆಡಿಕಲ್ ಕಾಲೇಜು ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಭೆ ಕರೆದ ಮೇಲೆ ಪ್ರಧಾನಿ ಇರಬೇಕು. ಪ್ರಧಾನಿಗಳ ಈ ಆಟಿಟ್ಯೂಡ್ ಸರಿ ಅಲ್ಲ. ಚುನಾವಣೆ ಭಾಷಣ ಮಾಡಲು ಬಿಹಾರಕ್ಕೆ ಹೋಗುತ್ತಾರೆ. ದೆಹಲಿಯಲ್ಲಿ ್ಲ ಬರಲು ಆಗುವುದಿಲ್ಲ ಎಂದರೆ ಹೇಗೆ? ಅವರು ಸೀರಿಯಸ್ ಇಲ್ಲ ಅಂತ ಅರ್ಥ ತಾನೆ ಎಂದು ಪ್ರಶ್ನೆ ಮಾಡಿದರು. ಪೆಹಲ್ಗಾಮ್ ದಾಳಿ ವಿಚಾರವಾಗಿ ಪ್ರಧಾನ ಮಂತ್ರಿಗಳು ಸರ್ವ ಪಕ್ಷಗಳ ಸಭೆ ಕರೆದಿದ್ದರು. ನಾವು ಎಲ್ಲರೂ ಭಾಗಿಯಾಗಿದ್ದೆವು. ಆದರೆ, ಪ್ರಧಾನಿಯೇ ಹಾಜರು ಇರಲಿಲ್ಲ. ದೊಡ್ಡ ದುರ್ಘಟನೆ ನಡೆದಿದೆ. ಸುಮಾರು 26 ಜನರು ಮೃತಪಟ್ಟಿದ್ದಾರೆ. ಅನೇಕ ಜನರು ಗಾಯಾಳುಗಳಾಗಿದ್ದಾರೆ. ಪ್ರಧಾನಿ ಇಲ್ಲದಿದ್ದರೆ ಹೇಗೆ ಎಂದು ಕೇಳಿದರು.
ಬಿಹಾರದಲ್ಲಿ ಪ್ರಧಾನಿ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಭಾಷಣ ಮಾಡುವ ಬದಲು ಇಲ್ಲಿ ಬಂದು ಸಮಜಾಯಿಷಿ ಹೇಳಬೇಕಿತ್ತು. ಏನೇನು ಘಟನೆ ನಡೆಯಿತು, ಯಾಕೆ ನಡೆಯಿತು, ಯಾರು ಹೊಣೆ ಹೊತ್ತಿದ್ದಾರೆ? ಸೆಕ್ಯೂರಿಟಿ ಲ್ಯಾಪ್ಸ್ ಆಗಿದೆಯಾ? ಇಂಟೆಲಿಜೆನ್ಸ್ ಲ್ಯಾಪ್ಸ್ ಆಗಿದೆಯಾ? ಐಬಿ ಲ್ಯಾಪ್ಸ್ ಆಗಿದೆಯಾ? ಇನ್ಫಾರ್ಮರ್ಸ್ ಲ್ಯಾಪ್ಸ್ ಆಗಿದೆಯಾ, ಪೊಲೀಸರ ಲ್ಯಾಪ್ಸ್ ಆಗಿದೆಯಾ? ಯಾರದ್ದು ಎನ್ನುವುದನ್ನು ನಮಗೆ ತಿಳಿಸಬೇಕು. ಆದರೆ, ಅವರು ಬರಲೇ ಇಲ್ಲ. ಅದಕ್ಕೆ ರಾಜನಾಥ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಿತು ಎಂದು ಬೇಸರ ಹೊರ ಹಾಕಿದರು.
ಪಹಲ್ಗಾಮ್‌ನಲ್ಲಿ ಏನಾಯ್ತು? ಜಾತಿ ಕೇಳಿ, ಧರ್ಮ ಕೇಳಿ ಬಲಿ ಹಾಕಿದರು. ಆ ರೀತಿ ನಡೆಯಬಾರದು. ಈ ರಾಜ್ಯದಲ್ಲೂ ಕೂಡ ಕೆಲವರು ಜಾತಿಯನ್ನು ಆಧರಿಸಿ, ಧರ್ಮವನ್ನೇ ಆಧರಿಸಿ ಮಾತನಾಡುತ್ತಾರೆ. ಅದು ಯಾವುದೇ ಕಾರಣಕ್ಕೂ ನಡೆಯಬಾರದು. ಶಿಕ್ಷಣ ಸಂಸ್ಥೆಯಲ್ಲಿ ನಾನು ಜಾತಿ ಧರ್ಮದ ಬಗ್ಗೆ ಮಾತನಾಡುವುದಿಲ್ಲ. ವಿದ್ಯಾರ್ಥಿಗಳು ಕೂಡ ಜಾತಿ-ಧರ್ಮದ ಬಗ್ಗೆ ಮಾತನಾಡಬಾರದು ಎಂದರು.
ಪಹಲ್ಗಾಮ್ ಘಟನೆಯಲ್ಲಿ ಸ್ವತಃ ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಇದು ಸೆಕ್ಯೂರಿಟಿ ಲ್ಯಾಪ್ಸ್ ಎಂದು. ಆ ಕಾರಣಕ್ಕಾಗಿ ಸಭೆ ಕರೆದಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸಿ ಎಂದು ಕೇಂದ್ರ ಗೃಹ ಸಚಿವರಿಗೆ ಹೇಳಿದ್ದೇವೆ. ಎಲ್ಲವನ್ನೂ ವ್ಯವಸ್ಥೆ ಮಾಡಬೇಕಿತ್ತು. ನೀವು ವ್ಯವಸ್ಥೆ ಮಾಡದೆ ಇರುವುದರಿಂದಲೇ ಈ ಸ್ಥಿತಿಗೆ ಬಂದಿರೋದು ಎಂದು ಹೇಳಿದ್ದೇವೆ. ಇನ್ಮುಂದೆ ಈ ರೀತಿ ಆಗೋದಿಲ್ಲ ಎಂದು ಅಮಿತ್ ಶಾ ತಿಳಿಸಿದ್ದಾರೆ. ಮೂರು ಹಂತಗಳ ಸೆಕ್ಯೂರಿಟಿ ಇದ್ದರೂ ಕೂಡ ಇಷ್ಟು ಜನರಿಗೆ ರಕ್ಷಣೆ ಕೊಡಲು ಆಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಏನೇ ಆದರೂ ಕೂಡ ದೇಶದ ದೃಷ್ಟಿಯಿಂದ ದೇಶದ ಒಗ್ಗಟ್ಟಿನ ದೃಷ್ಟಿಯಿಂದ ನಾವೆಲ್ಲರೂ ಕೂಡ ಒಂದಾಗಿ ರಕ್ಷಣೆ ಮಾಡೋಣ ಎಂದು ತಿಳಿಸಿದ್ದೇವೆ. ಸರ್ಕಾರದ ನಿರ್ಣಯಕ್ಕೆ ನಾವು ಕೂಡ ಬೆಂಬಲ ಸೂಚಿಸುತ್ತೇವೆ ಎಂದರು.
ಅಂಬೇಡ್ಕರ್ ಅವರನ್ನು ಕೆಲವರು ಒಪ್ಪುತ್ತಿಲ್ಲ. ಕರ್ನಾಟಕದ ಜನರಿಗೆ ಏನಾಗಿದೆ? ಪ್ರತಿಯೊಂದು ವಿಚಾರದಲ್ಲೂ ಅಂಬೇಡ್ಕರ್ ಅವರನ್ನು ಟೀಕೆ ಮಾಡುತ್ತಿದ್ದೀರಾ? ಅವರು ಸಂವಿಧಾನ ಕೊಡದಿದ್ದರೆ ನಿಮಗೆ ಯಾವುದೇ ಹಕ್ಕುಗಳೇ ಇರುತ್ತಿರಲಿಲ್ಲ. ಯಾವುದೇ ಕಾರಣಕ್ಕೂ ಬಾಬಾ ಸಾಹೇಬ್ ಅಂಬೇಡ್ಕರ್‌ಅವರನ್ನು ಟೀಕೆ ಮಾಡಬೇಡಿ. ದಲಿತರು ನಾನಾ ಕಾರಣಗಳಿಂದ ಹಿಂದೆ ಉಳಿದಿರಬಹುದು, ಮಾತನಾಡದೇ ಇರಬಹುದು. ಒಮ್ಮೆ ಅವರು ತಿರುಗಿ ಬಿದ್ದರೆ ಯಾರೂ ಕೂಡ ತಡೆಯಲು ಸಾಧ್ಯವಿಲ್ಲ. ಅಂಬೇಡ್ಕರ್ ಬಗ್ಗೆ ಕೇವಲವಾಗಿ ಮಾತನಾಡುತ್ತಿರುವ ವ್ಯಕ್ತಿಗಳು ಇದನ್ನು ಗಮನಿಸಬೇಕು. ಇನ್ನು ಮುಂದೆ ಯಾರೂ ಕೂಡ ಇಂತಹ ಮಾತುಗಳನ್ನು ಸಹಿಸುವುದಿಲ್ಲ ಎಂದು ಅಂಬೇಡ್ಕರ್ ವಿರೋಧಿಗಳಿಗೆ ಖರ್ಗೆ ಎಚ್ಚರಿಕೆ ನೀಡಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಸಂಸದ ರಾಧಾಕೃಷ್ಣ, ಶಾಸಕ ಎ.ಸಿ.ಶ್ರೀನಿವಾಸ್, ಕೊಳ್ಳೆಗಾಲ ಶಾಸಕ ಕೃಷ್ಣಮೂರ್ತಿ ಭಾಗಿಯಾಗಿದ್ದರು.