ಒಂದು ಕೈ, 15,000 ರಾಖಿ, 156 ಬಗೆಯ ಖಾದ್ಯ! ರಕ್ಷಾ ಬಂಧನ ದಿನ ದಾಖಲೆ ಬರೆದ ಖಾನ್ ಸರ್​, Video Viral

ವಿಜಯವಾಣಿ (50)
Published on

Video Viral: ರಕ್ಷಾ ಬಂಧನ ದಿನ ವಿಶ್ವ ದಾಖಲೆ ಬರೆದ ಖ್ಯಾತ ಆನ್​ಲೈನ್ ಶಿಕ್ಷಕ ಹಾಗೂ ಯುಟ್ಯೂಬರ್​ ಖಾನ್​ ಸರ್​, ಬರೋಬ್ಬರಿ 15 ಸಾವಿರ ರಾಖಿಯನ್ನು ಕಟ್ಟಿಸಿಕೊಳ್ಳುವ ಮೂಲಕ ವಿಶೇಷ ಕ್ಷಣಕ್ಕೆ ಪಾತ್ರರಾಗಿದ್ದಾರೆ. ಇದೊಂದು ದೊಡ್ಡ ಹಬ್ಬದ ರೀತಿಯಲ್ಲಿ ನಡೆದಿದ್ದು, ವಿವಿಧ ಬಗೆಯ ಖಾದ್ಯಗಳನ್ನು ಸವಿದು, ರಕ್ಷಾ ಬಂಧನವನ್ನು ತಮ್ಮ ನೆಚ್ಚಿನ ಶಿಕ್ಷಕರ ಜೊತೆ ಸಂಭ್ರಮಿಸಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

ವರದಿಗಳ ಪ್ರಕಾರ, ಬಿಹಾರದ ಪಾಟ್ನಾದಲ್ಲಿರುವ ಎಸ್​ಕೆ​ ಮೆಮೋರಿಯಲ್​ ಹಾಲ್​ನಲ್ಲಿ ಈ ಭರ್ಜರಿ ಸಂಭ್ರಮ ಜರುಗಿದೆ. ಯೂಟ್ಯೂಬ್​ನಲ್ಲಿ ಸಾವಿರಾರೂ ಮಕ್ಕಳಿಗೆ ಪಾಠ ಹೇಳಿಕೊಡುವ ಖಾನ್​ ಸರ್​ಗೆ ರಕ್ಷಾ ಬಂಧನ ದಿನ ರಾಖಿ ಕಟ್ಟಬೇಕೆಂದು ದೇಶದ ಇತರ ರಾಜ್ಯಗಳಲ್ಲಿರುವ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿರುವುದು ವರದಿಯಾಗಿದೆ. ಕುಟುಂಬದಿಂದ ದೂರ ಉಳಿದಿರುವ ಮತ್ತು ಕುಟುಂಬವೇ ಇಲ್ಲದ ಒಂದಷ್ಟು ವಿದ್ಯಾರ್ಥಿನಿಯರು ತಮ್ಮ ನೆಚ್ಚಿನ ಶಿಕ್ಷಕನನ್ನು ಅಣ್ಣ ಎಂದು ಭಾವಿಸಿ, ದಾಖಲೆ ಮಟ್ಟಕ್ಕೆ ರಾಖಿ ಕಟ್ಟಿರುವುದು ನಿಜಕ್ಕೂ ಹಲವರ ಕಣ್ಣಂಚಲ್ಲಿ ನೀರು ತರಿಸಿದೆ.

ಖಾನ್​ ಸರ್​ ಭಾವುಕನುಡಿ

ಪಿಟಿಐ ವರದಿ ಪ್ರಕಾರ, ತಮ್ಮ ವಿದ್ಯಾರ್ಥಿನಿಯರ ಬಗ್ಗೆ ಮಾತನಾಡಿದ ಖಾನ್​ ಸರ್​, "ವಿದ್ಯಾರ್ಥಿಗಳು ನನಗೆ ರಾಖಿ ಕಟ್ಟಿರುವುದು ನನ್ನ ಅದೃಷ್ಟ. ನಾವು ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಹೀಗೆ ಕಾಪಾಡಬೇಕು. ರಕ್ಷಾ ಬಂಧನವು ಸಹೋದರ ಸಹೋದರಿಯರಿಗೆ ಒಂದು ವಿಶೇಷ ಹಬ್ಬ. ಈ ದಾರವು ಬಾಂಧವ್ಯ ಮತ್ತು ವಾತ್ಸಲ್ಯದ ಮಹತ್ವವನ್ನು ಸೂಚಿಸುತ್ತದೆ. ಈಗ ನನ್ನ ಕೈಎತ್ತುವುದು ಕೂಡ ಕಷ್ಟವಾಗಿದೆ " ಎಂದು ಹೇಳಿದ್ದಾರೆ.

156 ವಿಭಿನ್ನ ಭಕ್ಷ್ಯ ಭೋಜನ

ರಾಖಿ ಕಟ್ಟುವ ಹಬ್ಬವನ್ನು ವಿಶೇಷವಾಗಿಸಲು, ವಿದ್ಯಾರ್ಥಿಗಳಿಗಾಗಿ 156 ವಿಭಿನ್ನ ಭಕ್ಷ್ಯಗಳನ್ನು ಖಾನ್​ ಸರ್​ ವ್ಯವಸ್ಥೆ ಮಾಡಿಸಿದ್ದರು ಎಂದು ವರದಿಯಾಗಿದೆ. ಇತರ ರಾಜ್ಯಗಳಿಂದ ತನಗಾಗಿ ಪ್ರಯಾಣಿಸಿದ ವಿದ್ಯಾರ್ಥಿಗಳೊಂದಿಗೆ ಖಾನ್​ ಸರ್​ ಸಂಭ್ರಮಿಸಿದ ಕ್ಷಣಗಳು ಸಹೋದರ-ಸಹೋದರಿಯ ಬಾಂಧವ್ಯವದ ಪ್ರತಿಬಿಂಬವಾಗಿದೆ. ಘಟನೆಯ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿದ್ದು, ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net