

ಲಾಹೋರ್(ಪಾಕಿಸ್ತಾನ): ಪಾಕ್ ಮೂಲದ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ರೋಡ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಭಾರತಕ್ಕೆ ಬೇಕಾಗಿದ್ದ ಈತನನ್ನು ಇತರ 19 ಭಯೋತ್ಪಾದಕರೊಂದಿಗೆ ಹಸ್ತಾಂತರಿಸುವಂತೆ ಭಾರತ 2002 ರಲ್ಲಿ ಪಾಕಿಸ್ತಾನಕ್ಕೆ ಒತ್ತಾಯಿಸಿತ್ತು.
ಇದನ್ನೂ ಓದಿ: ಷೇಧಿತ ಭಯೋತ್ಪಾದಕ ಗುಂಪುಗಳಾದ ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್ಎಫ್) ಮತ್ತು ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಶನ್ (ಐಎಸ್ವೈಎಫ್) ಮುಖ್ಯಸ್ಥನಾಗಿದ್ದ ಲಖ್ಬೀರ್ ಸಿಂಗ್ ರೋಡ್ ಹತ್ಯೆಗೀಡಾದ ಖಲಿಸ್ತಾನಿ ಉಗ್ರಗಾಮಿ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಅವರ ಸೋದರಳಿಯನಾಗಿದ್ದು, ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಈತ ಭಾರತ ವಿರುದ್ಧ ಉಗ್ರಗಾಮಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದ. 72 ವರ್ಷದ ಲಖ್ಬೀರ್ ಸಿಂಗ್ ಸಾವನ್ನು ಆತನ ಸಹೋದರ ಜಸ್ಬೀರ್ ಸಿಂಗ್ ರೋಡ್ ಖಚಿತಪಡಿಸಿದ್ದಾರೆ.
“ನನ್ನ ಸಹೋದರ ಲಖ್ಬೀರ್ ಸಿಂಗ್ ರೋಡ್ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು, ಅಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಆತನ ಪುತ್ರ ನಮಗೆ ತಿಳಿಸಿದ್ದಾನೆ. ಆತ ಮಧುಮೇಹಿಯಾಗಿದ್ದು, ಇಬ್ಬರು ಪುತ್ರರು, ಪುತ್ರಿ ಮತ್ತು ಪತ್ನಿ ಕೆನಡಾದಲ್ಲಿ ವಾಸವಾಗಿದ್ದಾರೆ ಎಂದು ತಿಳಿಸಿರುವುದಾಗಿ ಜಸ್ಬೀರ್ ಹೇಳಿದ್ದಾನೆ.
ಮೂಲತಃ ಪಂಜಾಬ್ನವನು: ಲಖ್ಬೀರ್ ಮೂಲತಃ ಪಂಜಾಬ್ನ ಮೋಗಾ ಜಿಲ್ಲೆಯವನು. ದುಬೈಗೆ ಹಾರಿ, ಅಲ್ಲಿಂದ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ. ಆದರೆ ಇವನ ಕುಟುಂಬವನ್ನು ಕೆನಡಾದಲ್ಲಿ ಇರಿಸಿದ್ದ. 2002 ರಲ್ಲಿ 19 ಇತರ ಭಯೋತ್ಪಾದಕರೊಂದಿಗೆ ಇವನನ್ನೂ ಹಸ್ತಾಂತರಿಸುವಂತೆ ಪಾಕಿಸ್ತಾನಕ್ಕೆ ಒತ್ತಾಯಿಸಲಾಗಿತ್ತು.
"ಲಖ್ಬೀರ್ ಸಿಂಗ್ ಪಂಜಾಬ್ನಲ್ಲಿ ಭಯೋತ್ಪಾದಕ ಚಟುವಟಿಕೆಗಳು, ವಿವಿಐಪಿಗಳು ಮತ್ತು ರಾಜಕೀಯ ನಾಯಕರನ್ನು ಗುರಿಯಾಗಿಸಲು ಗಡಿಯಾಚೆಯಿಂದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ರವಾನೆ ಮಾಡುತ್ತಿದ್ದ. ಇವನನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ)ಯಲ್ಲಿ 'ವೈಯಕ್ತಿಕ ಭಯೋತ್ಪಾದಕ' ಪಟ್ಟಿಗೆ ಸೇರಿಸಲಾಗಿತ್ತು.
ಭಾರತದ ಇತ್ತೀಚಿನ ಕ್ರಮಗಳು:
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿಶೇಷ ನ್ಯಾಯಾಲಯವು ಮೊಹಾಲಿಯಲ್ಲಿ ಲಖ್ಬೀರ್ಗೆ ಸೇರಿದ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಇತ್ತೀಚೆಗೆ ಆದೇಶಿಸಿತ್ತು. ಪಂಜಾಬ್ನ ಜಲಾಲಾಬಾದ್ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಳಿ 2021ರಲ್ಲಿ ಟಿಫಿನ್ ಬಾಂಬ್ ಸ್ಫೋಟ, 2021 ರ ಲುಧಿಯಾನ ಕೋರ್ಟ್ ಸ್ಫೋಟದ ಪ್ರಮುಖ ಸಂಚುಕೋರನಾಗಿದ್ದನು. ಇದಕ್ಕೆ ಸಂಬಂಧಿಸಿದಂತೆ ಲಖ್ಬೀರ್ ನ್ಯಾಯಾಲಯ ತೀರ್ಪಿನಲ್ಲಿ ಈತನ ಹೆಸರು ಉಲ್ಲೇಖಿಸಲಾಗಿದೆ.
ಅಂತರಾಷ್ಟ್ರೀಯವಾಗಿ ಹೆಸರಿಸಲಾದ ಭಯೋತ್ಪಾದಕ: ಲಖ್ಬೀರ್ ಐಎಸ್ವೈಎಫ್ನ ಮುಖ್ಯಸ್ಥನಾಗಿದ್ದ. ಇದು ಲಷ್ಕರ್-ಎ-ತೈಬಾ (ಎಲ್ಇಟಿ) ಸೇರಿದಂತೆ ಇಸ್ಲಾಮಿ ಉಗ್ರಗಾಮಿ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಸಕ್ರಿಯ ಭಯೋತ್ಪಾದಕ ಗುಂಪು. ಭಾರತದಲ್ಲಿ ನಿಷೇಧಕ್ಕೊಳಗಾಗುವುದರ ಜೊತೆಗೆ, 2001 ರಲ್ಲಿ ಯುಕೆಯಲ್ಲಿ ಈ ಗುಂಪನ್ನು ನಿಷೇಧಿಸಲಾಯಿತು.ಯುಕೆನಲ್ಲಿ ನಿಷೇಧದ ನಂತರ ಗುಂಪು ತನ್ನ ಹೆಸರನ್ನು ಸಿಖ್ ಫೆಡರೇಶನ್-ಯುಕೆ (ಎಸ್ಎಫ್ಯುಕೆ)ಎಂದು ಬದಲಾಯಿಸಿತ್ತು.