ಜೈಲಿನ ಮೇಲೆ ಖಾಕಿ ದಾಳಿ: ೧೬ ಸಾವಿರ ನಗದು, ೪ ಚಾಕುಗಳು, ಮೊಬೈಲ್ ಜಪ್ತಿ

Mysore Jail
Published on

ಬೆಂಗಳೂರು: ಅಕ್ರಮ ಚಟುವಟಿಕೆಗಳು ಹಾಗೂ ಇತ್ತೀಚೆಗೆ ಜೈಲಿನಲ್ಲಿ ಕೈದಿಗಳ ಪರಸ್ಪರ ಹೊಡೆದಾಡಿಕೊಂಡಿರುವ ಪ್ರಕರಣದ ಬೆನ್ನಲ್ಲೆ ಆಗ್ನೇಯ ವಿಭಾಗದ ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ದಾಳಿಯ ವೇಳೆ ೧೬ ಸಾವಿರ ನಗದು, ೪ ಚಾಕುಗಳು, ಒಂದು ಮೊಬೈಲ್ ಮತ್ತು ಎಲೆಕ್ಟ್ರಿಕ್ ಸ್ಟೌವ್ ಪತ್ತೆಯಾಗಿದೆ.

ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಸೂಚನೆ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಮುಂಜಾನೆ ೭ ಗಂಟೆಯಿಂದ ಬೆಳಗ್ಗೆ ೧೦ ಗಂಟೆವರೆಗೆ ಪರಪ್ಪನ ಅಗ್ರಹಾರ ಪಿಐ ಬಿ.ಎಸ್.ಸತೀಶ್, ಹುಳಿಮಾವು ಠಾಣೆಯ ಪಿಐ ಕುಮಾರಸ್ವಾಮಿ, ಬಂಡೆಪಾಳ್ಯ ಠಾಣೆಯ ಪಿಐ ಮಹೇಶ್ ಕನಕಗಿರಿ, ಎಲೆಕ್ಟ್ರಾನಿಕ್ ಸಿಟಿ ಠಾಣೆಯ ಪಿಐ ಜಿ.ಎಂ.ನವೀನ್, ಬೇಗೂರು ಠಾಣೆಯ ಪಿಐ ಕೃಷ್ಣಕುಮಾರ್ ಮತ್ತು ಸಿಬ್ಬಂದಿ ಸೇರಿ ೧೭೫ ಮಂದಿ ಅಧಿಕಾರಿ-ಸಿಬ್ಬಂದಿಯ ತಂಡ ದಾಳಿ ನಡೆಸಿದೆ.

ಜೈಲಿನ ವಿಶೇಷ ಭದ್ರತಾ ವಿಭಾಗ, ಸಜಾ ಬಂಧಿಗಳು, ಮಹಿಳಾ ಬಂಧಿಗಳು ಹಾಗೂ ವಿಚಾರಣಾಧಿನ ಕೈದಿಗಳು ಇರುವ ಬ್ಯಾರಕ್‌ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಶಿಕ್ಷಾ ಬಂಧಿ ವಿಭಾಗದ ಬಿ-ಬ್ಯಾರಕ್‌ನ ರೂಂ ನಂ ೧ರಲ್ಲಿ ವಾಸವಿದ್ದ ಚೆಲುವ ಎಂಬಾತನ ಬಳಿ ೭ ಸಾವಿರ ರೂ. ನಗದು, ಸಿ-ಬ್ಯಾರಕ್ ರೂಂ ನಂ.೧ರಲ್ಲಿದ್ದ ಇರ್ಷಾದ್ ಬಳಿ ೧ ಮೊಬೈಲ್, ಆಕಾಶ್ ಬಳಿ ೨ ಸಾವಿರ ರೂ. ನಗದು, ಬಾತ್ ರೂಂನಲ್ಲಿ ಇಟ್ಟಿದ್ದ ೫ ಸಾವಿರ ರೂ. ನಗದು, ಸಿ-ಬ್ಯಾರಕ್ ರೂಂ ನಂ.೭ ರಲ್ಲಿದ್ದ ಮಾರುತಿ ಎಂಬಾತನ ವಶದಲ್ಲಿ ೨,೫೦೦ ರೂ. ನಗದು, ಇದೇ ಬ್ಯಾರಕ್‌ನಲ್ಲಿದ್ದ ೧ ಎಲೆಕ್ಟ್ರಿಕ್ ಸ್ಟೌವ್, ೪ ಚಾಕುಗಳು, ಒಂದು ಮೊಬೈಲ್ ಚಾರ್ಜರ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯದಲ್ಲಿಯೇ ಅಧಿಕಾರಿಗಳ ವಿಚಾರಣೆ:

ಈ ಸಂಬಂಧ ಸಜಾ ಕೈದಿಗಳಿಗೆ ಅಕ್ರಮವಾಗಿ ನಿಷೇಧಿತ ವಸ್ತುಗಳ ಬಳಕ್ಕೆ ಅವಕಾಶ ನೀಡಿದ ಜೈಲಿನ ಕಾರಾಗೃಹದ ಅಧಿಕಾರಿಗಳು ಹಾಗೂ ಕೆಎಸ್‌ಐಎಸ್‌ಎಫ್ ಅಧಿಕಾರಿ-ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಜಾ ಕೈದಿಗಳ ಜತೆ ಜೈಲಿನ ಅಧಿಕಾರಿಗಳು ಶಾಮೀಲಾಗಿರುವ ಮಾಹಿತಿ ಇದ್ದು, ಸದ್ಯದಲ್ಲೇ ಸಂಬಂಧಿತ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲಾಗುತ್ತದೆ. ಜತೆಗೆ ಸಜಾ ಕೈದಿಗಳಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net