

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರೌಡಿಗಳ ಐಷರಾಮಿ ಜೀವನದ ಬೆನ್ನಲ್ಲೇ ಈಶಾನ್ಯ ವಿಭಾಗ ಪೊಲೀಸರು ರೌಡಿಶೀಟರ್‌ಗಳ ಮನೆ, ಅಡ್ಡೆಗಳ ಮೇಲೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ಈಶಾನ್ಯ ವಿಭಾಗ ಡಿಸಿಪಿ ಸುಜೀತ್ ನೇತೃತ್ವದಲ್ಲಿ ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳು ಮಂಗಳವಾರ ಬೆಳ್ಳಂಬೆಳಗ್ಗೆ 138 ರೌಡಿಶೀಟರ್, ಅಪರಾಧ ಹಿನ್ನೆಲೆಯುಳ್ಳವರು ಮತ್ತು ಹಳೆಯ ಆರೋಪಿಗಳ ಮನೆ ಮತ್ತು ಅಡ್ಡೆಗಳ ಮೇಲೆ ದಾಳಿ ನಡೆಸಿದರು. ಈ ವೇಳೆ ಗಾಢ ನಿದ್ದೆಯಲ್ಲಿದ್ದ ರೌಡಿಗಳು ಬೆಚ್ಚಿಬಿದ್ದಿದ್ದಾರೆ. ಪರಿಶೀಲನೆ ಸಂದರ್ಭ ಕೆಲವರ ಮನೆಯಲ್ಲಿ ಲಾಂಗ್, ಮಚ್ಚು ಸೇರಿ ಮಾರಕಾಸಗಳು ಪತ್ತೆಯಾಗಿವೆ. ಅಂತಹವರನ್ನು ಠಾಣೆಗೆ ಕರೆತಂದು ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ.
ಎಲ್ಲರ ಮೊಬೈಲ್, ಮನೆ ವಿಳಾಸ ಮತ್ತು ಯಾರ ಜತೆಗೆ ವಾಸ ಇದ್ದಾರೆ, ಉದ್ಯೋಗ ಏನು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ಪ್ರಕ್ರಿಯೆ ಬೆಂಗಳೂರು ನಗರದಲ್ಲಿ ನಿರಂತರವಾಗಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.