

ಕೋಲಾರ: ಕೋಲಾರ ತಾಲೂಕು ನರಸಾಪುರ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ರೈತರೊಬ್ಬರಿಗೆ ಯಾಮಾರಿಸಿದ ಖದೀಮರು ಬ್ಯಾಂಕಿನಿಂದ ಬಿಡಿಸಿಕೊಂಡು ಬಂದಿದ್ದ 1.20 ಲಕ್ಷ ರೂ. ಹಣದಲ್ಲಿ 1.10 ಲಕ್ಷ ರೂ. ಹೊತ್ತೊಯ್ದಿದ್ದಾರೆ.
ಸೂಲೂರು ಗ್ರಾಮದ ರಾಮಪ್ಪ (75) ಎಂಬುವವರು ಬ್ಯಾಂಕ್ ಆ್ ಬರೋಡಾದಿಂದ ಸುಮಾರು 1.20 ಲಕ್ಷ ರೂ.ಗಳನ್ನು ಬಿಡಿಸಿಕೊಂಡು ನರಸಾಪುರದ ಬಸ್ ನಿಲ್ದಾಣದ ಬಳಿ ಇರುವ ಅಂಗಡಿಯಲ್ಲಿ ಕಡಲೆಪುರಿ ತೆಗೆದುಕೊಂಡು ಹೋಗುವಾಗ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿ ನಿಮ್ಮ ಶರ್ಟ್ ಮೇಲೆ ಗಲೀಜು ಇದೆ ಎಂದು ಯಾಮಾರಿಸಿದ್ದಾನೆ.
ಆಗ ರೈತ ಒಂದು ಕೈಯಲ್ಲಿ ಹಣದ ಬ್ಯಾಗ್ ಇಟ್ಟುಕೊಂಡು ಇನ್ನೊಂದು ಕೈಯಲ್ಲಿ ತೊಳೆದುಕೊಳ್ಳಲು ಹೋದಾಗ, "ಎರಡು ಕೈಯಲ್ಲಿ ತೊಳೆದುಕೊಳ್ಳಿ' ಎಂದು ಹೇಳಿ ತಾನೇ ನೀರನ್ನೂ ಹಾಕಿದ್ದಾನೆ. ಆಗ ರೈತ ತನ್ನ ಹಣದ ಬ್ಯಾಗ್ಅನ್ನು ಎರಡು ಮೀಟರ್ ಅಂತರದ ಚಪ್ಪಡಿಯ ಮೇಲೆ ಇಟ್ಟು ಶರ್ಟ್ ತೊಳೆದುಕೊಂಡು ಬಂದು ಬ್ಯಾಗ್ ನೋಡಿದಾಗ ಬ್ಯಾಗ್ ನಾಪತ್ತೆಯಾಗಿದೆ. ಅದೇ ಕ್ಷಣಕ್ಕೆ ನೀರು ಹಾಕಿದವನೂ ನಾಪತ್ತೆಯಾಗಿದ್ದಾನೆ. ಬ್ಯಾಗ್ನಲ್ಲಿದ್ದ ಒಟ್ಟು ಹಣದಲ್ಲಿ 10 ಸಾವಿರ ರೂ.ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಉಳಿದ ಹಣ ಕಳ್ಳನ ಪಾಲಾಗಿದೆ. ತಕ್ಷಣ ರೈತ ಕಿರುಚಿಕೊಂಡು ಎಲ್ಲ ಕಡೆ ಹುಡುಕಿದರೂ ಹಣದ ಬ್ಯಾಗ್ ಸಿಗಲಿಲ್ಲ. ಸ್ಥಳಕ್ಕೆ ಬಂದ ವೇಮಗಲ್ ಪೊಲೀಸರು ಠಾಣೆಯ ಇನ್ಸ್ಪೆಕ್ಟರ್ ಮಂಜು, ಸಬ್ ಇನ್ಸ್ಪೆಕ್ಟರ್ ಹೇಮಂತ್ ಅವರು ಬ್ಯಾಂಕ್ ಹಾಗೂ ಇತ ಕಡೆಯ ಸಿ.ಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.