ಬಸ್ ತಂಗುದಾಣವನ್ನೆ ಕದೊಯ್ದ ಖದೀಮರು

20062021 Raichur Bus stand
Published on

ಬೆಂಗಳೂರು: ಚಾಲಾಕಿ ಕಳ್ಳರ ಗುಂಪೊಂದು ನಗರ ಪೊಲೀಸ್ ಆಯುಕ್ತರ ಕಚೇರಿಯ ಕೂಗಳತೆಯ ದೂರದಲ್ಲಿದ್ದ ಬಸ್ ತಂಗುದಾಣವನ್ನೇ ಕಳ್ಳತನ ಮಾಡಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿ ಹಿಂಭಾಗದಲ್ಲಿ ಇರುವ ಕನ್ನಿಂಗ್ ಹ್ಯಾಮ್ ರಸ್ತೆಯ ಕಾಫಿ ಡೇ ಎದುರು ೧೦ ಲಕ್ಷ ರೂ. ವೆಚ್ಚದಲ್ಲಿ ಬಿಬಿಎಂಪಿಯಿಂದ ಸ್ಟೇನ್ ಲೆಸ್ ಸ್ಟೀಲ್‌ನಲ್ಲಿ ಬಸ್ ತಂಗುದಾಣ ನಿರ್ಮಿಸಲಾಗಿತ್ತು. ಇದೀಗ ದುಷ್ಕರ್ಮಿಗಳು ಆ ಬಸ್ ತಂಗುದಾಣವನ್ನೇ ಕಳವು ಮಾಡಿದ್ದಾರೆ.
ನಗರದಲ್ಲಿ ಬಸ್ ತಂಗುದಾಣ ನಿರ್ಮಾಣ ಸಂಬಂಧ ಸೈನ್ಫೋಸ್ ಇಂಡಿಯಾ ಲಿಮಿಟೆಡ್ ಕಂಪನಿ ಬಿಬಿಎಂಪಿಯಿಂದ ಟೆಂಡರ್ ಪಡೆದಿತ್ತು. ಅದರಂತೆ ಕಳೆದ ಆಗಸ್ಟ್ ೨೧ರಂದು ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಈ ಬಸ್ ತಂಗುದಾಣ ನಿರ್ಮಿಸಿತ್ತು. ಆಗಸ್ಟ್ ೨೮ರಂದು ಬಂದು ನೋಡಿದಾಗ ಬಸ್ ತಂಗುದಾಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದರೆ, ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಕಂಪನಿಯ ಸಹ ಉಪಾಧ್ಯಕ್ಷ ಎನ್.ರವಿ ರೆಡ್ಡಿ ಅವರು ಬಸ್ ತಂಗುದಾಣ ಕಳ್ಳತನವಾಗಿರುವ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಸ್ ತಂಗುದಾಣ ಕಳ್ಳತನವಾಗಿರುವ ಬಗ್ಗೆ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ, ದುಷ್ಕರ್ಮಿಗಳ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net