ಕೇರಳದ ಅಪಾರ್ಟ್‌ಮೆಂಟ್‌ನಲ್ಲಿ ನಕಲಿ ಮತದಾರರು ಪತ್ತೆ :ಜಿಲ್ಲಾಧಿಕಾರಿಗಳಿಗೆ ದೂರು ದಾಖಲು | fake voters

Kerala fake voters
Published on

fake voters: ಕೇರಳದ ತ್ರಿಶೂರ್ ಜಿಲ್ಲೆಯ ಫ್ಲಾಟ್ ಮಾಲೀಕರೊಬ್ಬರು ತಮ್ಮ ವಿಳಾಸವನ್ನು ಬಳಸಿಕೊಂಡು ತಮಗೆ ತಿಳಿಯದೆ ಒಂಬತ್ತು ನಕಲಿ ಮತಗಳನ್ನು ನೋಂದಾಯಿಸಿರುವ ಕುರಿತು ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಪೂಂಕುನ್ನಂನಲ್ಲಿರುವ ಕ್ಯಾಪಿಟಲ್ ವಿಲೇಜ್ ಅಪಾರ್ಟ್‌ಮೆಂಟ್‌ನ ಫ್ಲಾಟ್ ಸಂಖ್ಯೆ 4C ಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಕಟ್ಟಡದ ಮಾಲೀಕ ಪ್ರಸನ್ನ, ತ್ರಿಶೂರ್‌ನಲ್ಲಿ ಮನೆಯಲ್ಲಿ ತಾವೊಬ್ಬರು ಮಾತ್ರ ಮತ ಚಲಾಯಿಸುವ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಸನ್ನ, ತಮ್ಮ ಕುಟುಂಬದಲ್ಲಿ ನಾಲ್ವರು ವಯಸ್ಕರು ಮತ್ತು ಇಬ್ಬರು ಮಕ್ಕಳು ಇದ್ದಾರೆ, ಉಳಿದ ವಯಸ್ಕರು ತಮ್ಮ ಪೂರ್ವಜರ ಗ್ರಾಮವಾದ ಪೂಚಿನಿಪದಂನಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. ಪರಿಶೀಲನೆಗಾಗಿ ತಮ್ಮನ್ನು ಸಂಪರ್ಕಿಸಿದಾಗ ಒಂಬತ್ತು ಹೆಚ್ಚುವರಿ ಹೆಸರುಗಳ ಬಗ್ಗೆ ತಿಳಿಯಿತು ಎಂದು ಹೇಳಿದರು. ನಾವು ನಾಲ್ಕು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ, ಅವರು ಯಾರೂ ಎನ್ನುವುದು ನಮಗೆ ಗೊತ್ತಿಲ್ಲ, ನಮ್ಮ ಒಪ್ಪಿಗೆಯಿಲ್ಲದೆ ನಮ್ಮ ವಿಳಾಸಕ್ಕೆ ಅವರು ಹೆಸರುಗಳನ್ನು ಸೇರಿಸಿರುವುದು ತಪ್ಪು, ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ ಎಂದರು.

ವಿಪಕ್ಷಗಳ ಆಕ್ರೋಶ

ಪೂಂಕುನ್ನಂನ ವಾಟರ್ ಲಿಲಿ ಮತ್ತು ಕ್ಯಾಪಿಟಲ್ ವಿಲೇಜ್‌ನಂತಹ ಇತರ ಫ್ಲಾಟ್‌ಗಳಲ್ಲಿಯೂ ಇದೇ ರೀತಿಯ ಅಕ್ರಮ ಮತದಾರರ ಪಟ್ಟಿ ಇವೆ ಎಂದು ಸಿಪಿಎಂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಖಾಲಿ ಇರುವ ಫ್ಲಾಟ್‌ಗಳನ್ನು ಇತರ ಜಿಲ್ಲೆಗಳಿಂದ ಮತಗಳನ್ನಾಗಿ ವರ್ಗಾಯಿಸಲು ನಕಲಿ ವಿಳಾಸಗಳಾಗಿ ಬಳಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮತದಾರರ ನೋಂದಣಿ ಸಮಯದಲ್ಲಿ ಚುನಾವಣಾ ಆಯೋಗವು ದೊಡ್ಡ ಪ್ರಮಾಣದ ಅಕ್ರಮಗಳಿಗೆ ಅವಕಾಶ ನೀಡಿದೆ ಎಂದು ಆರೋಪಿಸಿದ ತ್ರಿಶೂರ್‌ನ ಸಿಪಿಎಂ ನಾಯಕ ವಿ.ಎಸ್. ಸುನೀಲ್ ಕುಮಾರ್, ಒಂದೇ ಬೂತ್‌ನಲ್ಲಿ 280 ಅರ್ಜಿಗಳು ಒಟ್ಟಿಗೆ ಬಂದಿವೆ ಮತ್ತು ಇತರ ಕ್ಷೇತ್ರಗಳ ಜನರು ಮತ್ತು ವಲಸೆ ಕಾರ್ಮಿಕರ ಹೆಸರುಗಳನ್ನು ಸೇರಿಸಲಾಗಿದೆ ಎಂದು ತಿಳಿಸಿದರು.

ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಮಾತನಾಡಿ, ದೂರುಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು, ಬಿಜೆಪಿ ಅಕ್ರಮವಾಗಿ ಮತಗಳನ್ನು ಸೇರಿಸುತ್ತಿದೆ ಮತ್ತು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು.

2024 ರ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಗೆದ್ದ ಏಕೈಕ ಕ್ಷೇತ್ರ ತ್ರಿಶೂರ್, ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ, ಎಲ್‌ಡಿಎಫ್‌ನ ಸುನಿಲ್ ಕುಮಾರ್ ಮತ್ತು ಯುಡಿಎಫ್‌ನ ಕೆ ಮುರಳೀಧರನ್ ಅವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net