ಕರೊನಾ ಕೇಂದ್ರಬಿಂದು ಎನಿಸಿಕೊಂಡಿದ್ದ ಕೇರಳದಲ್ಲಿ ಲಾಕ್​ಡೌನ್​ ಸಡಿಲಗೊಳ್ಳುವುದೇ.... ಸಡಿಲಗೊಂಡರೆ ಏನೆಲ್ಲ ಆಗುತ್ತದೆ....?

kerala
Published on

ತಿರುವನಂತಪುರ: ಕರೊನಾ ಸೋಂಕಿನ ಕೇಂದ್ರಬಿಂದು ಎನಿಸಿಕೊಂಡಿದ್ದ ಕೇರಳ ಇದೀಗ ಸೋಂಕು ಹರಡುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಈ ರಾಜ್ಯದಲ್ಲಿ ಈಗ ಪ್ರತಿದಿನ ಸೋಂಕು ಪತ್ತೆಯಾಗುತ್ತಿರುವವರ ಸಂಖ್ಯೆ ಒಂದಂಕಿಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್​ಡೌನ್​ ನಿಯಮವನ್ನು ಹಂತಹಂತವಾಗಿ ಸಡಿಲಗೊಳಿಸಲು ಪಿಣರಾಯಿ ವಿಜಯನ್​ ನೇತೃತ್ವದ ಸರ್ಕಾರ ಮುಂದಾಗಿದೆ.

ರಾಜ್ಯವನ್ನು ಕೆಂಪು, ಕಿತ್ತಳೆ ಎ, ಕಿತ್ತಳೆ ಬಿ ಮತ್ತು ಹಸಿರು ಎಂದು 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ಕೆಂಪು ವಲಯದಲ್ಲಿ ಬರುವ ಕಾಸರಗೋಡು, ಕಣ್ಣೂರು, ಕೋಳಿಕ್ಕೋಡ್​ ಮತ್ತು ಮಲ್ಲಾಪುರಂನಲ್ಲಿ ಯಾವುದೇ ರೀತಿಯ ಸಡಿಲಿಕೆ ಇರುವುದಿಲ್ಲ. ಇಲ್ಲಿನ ಸೀಲ್​ಡೌನ್​ ಆದ ಪ್ರದೇಶಗಳಲ್ಲಿ ಜನ, ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದ್ದು, ಅಗತ್ಯವಸ್ತುಗಳ ಸರಬರಾಜಿಗಾಗಿ ಕೇವಲ ಎರಡು ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಹೊಂದಿರಲಿವೆ.

ಇನ್ನುಳಿದ ಪ್ರದೇಶಗಳಲ್ಲಿ ಆಯಾ ವರ್ಗೀಕರಣವನ್ನು ಆಧರಿಸಿ ಲಾಕ್​ಡೌನ್​ ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದೆ.
ನಾನ್​ಹಾಟ್​ಸ್ಪಾಟ್​ ಎನಿಸಿಕೊಂಡಿರುವ ಈ ಪ್ರದೇಶಗಳಲ್ಲಿ ರಾತ್ರಿ 7 ಗಂಟೆಯವರೆಗೆ ಹೋಟೆಲ್​ನಲ್ಲಿ ತಿಂಡಿ, ಭೋಜನ ಮಾಡಲು ಅವಕಾಶ ನೀಡಲಾಗುತ್ತಿದೆ. ಸರಿ ಮತ್ತು ಬೆಸ ಸಂಖ್ಯೆಯನ್ನು ಆಧರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ಜಿಲ್ಲೆಯ ಒಳಭಾಗದಲ್ಲಿ ಸಮೀಪದ ಊರುಗಳಿಗೆ ಬಸ್​ಗಳ ಸಂಚಾರ ಆರಂಭಿಸಲಾಗುತ್ತಿದೆ. ಆದರೂ ಬಸ್​ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಕಿತ್ತಳೆ ಬಿ ವಲಯದಲ್ಲಿ ಇರುವ ಅಲ್ಲಪ್ಪುಳ, ತ್ರಿವೇಂಡ್ರಂ, ಪಾಲಕ್ಕಾಡ್​, ವಯನಾಡ್​ ಮತ್ತು ತ್ರಿಷೂರ್​ನಲ್ಲಿ ಈ ಸಡಿಲಿಕೆಗಳು ಏಪ್ರಿಲ್​ 20ರಿಂದ ಜಾರಿಗೆ ಬರಲಿವೆ.

ಕಿತ್ತಳೆ ಎ ವಲಯದಲ್ಲಿರುವ ಪಟ್ಟಣಂತಿಟ್ಟಾ, ಎನ್ರಾಕುಲಂ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಈ ಸಡಿಲಿಕೆ ಏಪ್ರಿಲ್​ 24ರಿಂದ ಜಾರಿಗೊಳ್ಳಲಿದೆ.
ಹಸಿರು ವಲಯದಲ್ಲಿರುವ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಸೋಮವಾರದಿಂದಲೇ ಜನಜೀವನ ಸಾಮಾನ್ಯಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net