

ನವದೆಹಲಿ: ನೀತಿ ಆಯೋಗ 4ನೇ ವರ್ಷ (2019-20)ದ ಆರೋಗ್ಯ ಸೂಚ್ಯಂಕವನ್ನು ಪ್ರಕಟಿಸಿದ್ದು, ಕೇರಳ ಮತ್ತು ತಮಿಳುನಾಡುಗಳು ಮೊದಲ ಎರಡು ಸ್ಥಾನಗಳಲ್ಲಿ ಭದ್ರವಾಗಿ ಮುಂದುವರಿದಿವೆ. ತೆಲಂಗಾಣ ಮೂರನೇ ಸ್ಥಾನದಲ್ಲಿದೆ. ಚಿಕ್ಕ ರಾಜ್ಯಗಳ ಪೈಕಿ ಮಿಜೋರಾಂ ಒಟ್ಟಾರೆ ಮತ್ತು ಉನ್ನತೀಕರಣದ ಸಾಧನೆಯಲ್ಲಿ ಮುನ್ನಡೆ ಸಾಧಿಸಿದೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ಒಟ್ಟಾರೆ ಸಾಧನೆಯಲ್ಲಿ ದಹೆಲಿ, ಜಮ್ಮು ಮತ್ತು ಕಾಶ್ಮೀರಗಳು ಕೊನೆಯ ಸ್ಥಾನಗಳಲ್ಲಿವೆ.
ಈ ವರದಿಯನ್ನು ನೀತಿ ಆಯೋಗವು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ವಿಶ್ವ ಬ್ಯಾಂಕ್ ಸಹಕಾರ ದೊಂದಿಗೆ ಸಿದ್ಧಪಡಿಸಿ ಪ್ರಕಟಿಸುತ್ತಿದೆ. ಈ ವರದಿ ಪ್ರಕಾರ 2019-20 ಅನ್ನು ಉಲ್ಲೇಖ ವರ್ಷ ಎಂದೂ 2018-19 ಅನ್ನು ಮೂಲ ವರ್ಷ ಎಂದೂ ನಮೂದಿಸಲಾಗಿದೆ.
ಸೂಚ್ಯಂಕದ ಹಿನ್ನೆಲೆ: ಕಳೆದ ಕೆಲವು ದಶಕಗಳಲ್ಲಿ ಭಾರತ ಸ್ಥಿರವಾದ ಆರ್ಥಿಕ ಬೆಳವಣಿಗೆ ದಾಖಲಿಸುತ್ತ ಬಂದಿದೆ. ಆದರೆ ಆರೋಗ್ಯ ಕ್ಷೇತ್ರದ ಸಾಧನೆ ಇದಕ್ಕೆ ಪೂರಕವಾಗಿ ಇರಲಿಲ್ಲ. 2015ರಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತ ಮುಖ್ಯಸ್ಥರು ಒಮ್ಮತದಿಂದ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿಯನ್ನು ಒಪ್ಪಿಕೊಂಡಿದ್ದಾರೆ. ಆರೋಗ್ಯ, ಪೌಷ್ಟಿಕಾಂಶ, ಶಿಕ್ಷಣ, ಮಹಿಳೆ ಮತ್ತು ಮಕ್ಕಳ ವಿಚಾರಗಳು ಆದ್ಯತೆಯ ಮೇರೆಗೆ ಪರಿಗಣಿಸಲ್ಪಟ್ಟಿವೆ. ಕ್ಷಿಪ್ರಗತಿಯಲ್ಲಿ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವುದು ಈ ಕಾರ್ಯಸೂಚಿಯ ಉದ್ದೇಶ. ಇದರ ಹೊಣೆಗಾರಿಕೆಗಳು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೊಂಡಿವೆ. ಆದಾಗ್ಯೂ ಬಹುತೇಕ ಎಲ್ಲವೂ ರಾಜ್ಯ ಸರ್ಕಾರಗಳದ್ದೇ ಹೊಣೆಗಾರಿಕೆ. ಹೀಗಾಗಿ ಈ ಪ್ರಗತಿಯ ವೇಗವನ್ನು ಹೆಚ್ಚಿಸಲು ಆರೋಗ್ಯ ಸೂಚ್ಯಂಕ ಸೇರಿ ವಿವಿಧ ಸೂಚ್ಯಂಕಗಳ ಮಾಪನವನ್ನು ಜಾರಿಗೊಳಿಸಲಾಗಿದೆ.
ಸುಸ್ಥಿರ ಅಭಿವೃದ್ಧಿಯ ಗುರಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಗದಿಯಾಗಿರುವ ಸುಸ್ಥಿರ ಅಭಿವೃದ್ಧಿ (ಎಸ್ಡಿಜಿ) ಸಾಧಿಸುವುದಕ್ಕೆ ಭಾರತ ಬದ್ಧತೆ ತೋರಿದೆ. ಇದರ ಪ್ರಕಾರ, ಬಡತನ ಕೊನೆಗೊಳಿಸುವುದು, ಪರಿಸರ ರಕ್ಷಣೆ, ಎಲ್ಲರೂ ಹೊಸ ಜಾಗತಿಕ ಎಸ್ಡಿಜಿಯ ಭಾಗವಾಗಿ ಎಲ್ಲರೂ ಇರುವುದನ್ನು ಖಾತರಿಪಡಿಸಬೇಕಾಗಿದೆ. 2030ರ ಗಡುವನ್ನೂ ಇದಕ್ಕೆ ನಿಗದಿ ಮಾಡಲಾಗಿದೆ.
ಭಾರತದಲ್ಲಿ ಎಸ್ಡಿಜಿ: ಭಾರತದಲ್ಲಿ ಆರೋಗ್ಯವಂತ ಸಮಾಜ ನಿರ್ವಣಕ್ಕೆ ಮತ್ತು ಪ್ರತಿಯೊಬ್ಬರ ಕ್ಷೇಮವನ್ನು ಖಾತರಿಪಡಿಸಲು ಸರ್ಕಾರಗಳು ತೀವ್ರ ಮುತುವರ್ಜಿ ವಹಿಸಿವೆ. ಇದಕ್ಕೆ ಪೂರಕವಾಗಿ ಮೂಲಸೌಕರ್ಯಗಳ ವೃದ್ಧಿಗೆ ಹೂಡಿಕೆಯನ್ನೂ ಮಾಡುತ್ತಿವೆ. ಇದರ ವೇಗ ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಾಗಿದೆ.