

ಶಿವಮೊಗ್ಗ: ಅನಿವಾಸಿ ಕನ್ನಡಿಗರ ಅವಶ್ಯಕತೆ-ಸಮಸ್ಯೆಗಳಿಗೆ ಸ್ಪಂದಿಸಲು ಕೇರಳ ಮಾದರಿಯಲ್ಲಿ ಪ್ರತ್ಯೇಕ ಸಚಿವಾಲಯ ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಸಚಿವಾಲಯ ಸ್ಥಾಪಿಸಿ ನೀತಿ, ನಿಯಮಾವಳಿ ರೂಪಿಸಲಾಗುತ್ತಿದೆ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲೆಯ ಅನಿವಾಸಿ ಕನ್ನಡಿಗರು ಹಾಗೂ ಕುಟುಂಬದವರಿಂದ ಅಹವಾಲು ಮತ್ತು ದೂರು ಸ್ವೀಕಾರ ಸಭೆ ನಡೆಸಿದ ಅವರು, ಗಲ್ಫ್ ರಾಷ್ಟ್ರಗಳಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೇರಳದಲ್ಲಿ ಈಗಾಗಲೇ ಪ್ರತ್ಯೇಕ ಸಚಿವಾಲಯ, ಸಚಿವರು, ಅಧಿಕಾರಿ ವರ್ಗ ಇದ್ದು, 350 ಕೋಟಿ ರೂ. ಬಜೆಟ್ ತೆಗೆದಿರಿಸಲಾಗಿದೆ. ವಿದೇಶಗಳಿಂದ ಹಿಂದಿರುಗಿ ಬಂದು ಭಾರತದಲ್ಲೇ ನೆಲೆಸುವ ಎನ್‌ಐಆರ್‌ಗಳಿಗೆ ನೆರವಾಗುವ ಉದ್ದೇಶದಿಂದ ಪ್ರತ್ಯೇಕ ಸಚಿವಾಲಯಕ್ಕೆ ಬೇಡಿಕೆ ಇಟ್ಟಿದ್ದೇವೆ. ಅದರ ಜತೆಗೆ ಕ್ಷಿಪ್ರ ನ್ಯಾಯ(ಫಾಸ್ಟ್‌ಟ್ರಾೃಕ್ ಜಸ್ಟಿಸ್), ವಿಮಾ ಸೌಲಭ್ಯಗಳನ್ನು ಕಲ್ಪಿಸುವ ಆಶಯಗಳನ್ನು ಹೊಂದಿದ್ದು, ಅನುದಾನ ನೀಡುವಂತೆ ಸಮಿತಿ ಅಧ್ಯಕ್ಷ, ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಕಾಂಬೋಡಿಯಾ ಮತ್ತು ವಿಯೆಟ್ನಾಂನಲ್ಲಿ ಕರ್ನಾಟಕದ 3-4 ಸಾವಿರ ಜನರು ಸಿಕ್ಕಿಹಾಕಿಕೊಂಡಿದ್ದಾರೆ. ಮನೆ ಕೆಲಸ, ಡೇಟಾ ಎಂಟ್ರಿ, ಪೆಟ್ರೋಲ್ ಬಂಕ್ ಕೆಲಸಕ್ಕೆಂದು ಕರೆದೊಯ್ಯುತ್ತಿದ್ದಾರೆ. ಡೇಟಿಂಗ್ ಆ್ಯಪ್‌ಗಳಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕೆಲಸ ಮಾಡಲು ಒಪ್ಪದಿದ್ದಾಗ ಕತ್ತಲೆ ಕೋಣೆಗಳಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಮತ್ತು ಕೊಪ್ಪದ ಇಬ್ಬರು ಕನ್ನಡಿಗರ ರಕ್ಷಣೆ ಮಾಡಲಾಗಿದೆ ಎಂದು ಹೇಳಿದರು. ವಿಶ್ವದೆಲ್ಲೆಡೆ ನೆಲೆಸಿರುವ ಅನಿವಾಸಿ ಕನ್ನಡಿಗರ ಆಕಾಂಕ್ಷೆ, ಅವಶ್ಯಕತೆ ಮತ್ತು ನಿರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು 2016-17ರಲ್ಲಿ ಅನಿವಾಸಿ ಭಾರತೀಯ ನೀತಿ ಹೊರತರಲಾಗಿದೆ. ಗಲ್ಫ್ ದೇಶಗಳಿಗೆ ತೆರಳಿದ ಅನಿವಾಸಿ ಕನ್ನಡಿಗರಿಂದ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆ ಹೊತ್ತ ಕರೆಗಳು ಬರುತ್ತಿರುತ್ತವೆ ಎಂದರು.
ಆನ್‌ಲೈನ್ ನೋಂದಣಿ ಅನುಕೂಲ: ವಿದೇಶಕ್ಕೆ ತೆರಳುವವರು ಸಮಿತಿ ಕಚೇರಿ ಅಥವಾ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡರೆ ಸಂಕಷ್ಟದ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಬಹುದು ಎಂದು ಡಾ. ಆರತಿ ಕೃಷ್ಣ ಹೇಳಿದರು. ಅನಿವಾಸಿಯರ ಸಮಸ್ಯೆಗಳಿಗೆ ಸಂಬಂಧಿಸಿ ಬೆಂಗಳೂರಿಗೆ ಬರಲು ಕಷ್ಟವಾದಲ್ಲಿ ತಹಸೀಲ್ದಾರ್, ಎಸಿ ಕಚೇರಿ, ಜಿಲ್ಲಾಡಳಿತಕ್ಕೂ ದೂರು ನೀಡಬಹುದು ಎಂದರು. ಶಿವಮೊಗ್ಗ, ಎಚ್.ಡಿ.ಕೋಟೆ ಮತ್ತು ಹುಣಸೂರಿನ ಹಕ್ಕಿಪಿಕ್ಕಿ ಸಮುದಾಯದವರು ವಿಶ್ವದೆಲ್ಲೆಡೆ ಸಂಚರಿಸುತ್ತಾರೆ. ಅವರು ಕೆಲಸಕ್ಕೆ ತೆರಳಿದ ದೇಶದಲ್ಲಿ ಹಲವು ಕಷ್ಟಗಳನ್ನು ಅನುಭವಿಸುತ್ತಾರೆ. ಕರೊನಾ ಮತ್ತಿತರ ಸಂಕಷ್ಟದ ಸಮಯದಲ್ಲಿ ಅನಿವಾಸಿ ಕನ್ನಡಿಗರಿಗೆ ಸಹಾಯ ಮಾಡಲಾಗಿದೆ ಎಂದು ಹೇಳಿದರು.
ಏಜೆನ್ಸಿಗಳ ಪರಿಶೀಲಿಸಿ
ವಿದೇಶಕ್ಕೆ ತೆರಳುವ ಭಾರತೀಯರು ಏಜೆನ್ಸಿ ಅಧಿಕೃತವೋ, ಅಲ್ಲವೋ ಎಂಬುದನ್ನು ವಿದೇಶಾಂಗ ಸಚಿವಾಲಯದ ಜಾಲತಾಣದಲ್ಲಿ ಪರಿಶೀಲಿಸಬೇಕು. ಹೊರದೇಶಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಅಥವಾ ನೌಕರಿ ಮಾಡಲು ತೆರಳುವ ಮುನ್ನ ಕುಟುಂಬದವರಿಗೆ ಏಜೆನ್ಸಿ, ಕಂಪನಿ, ಶಿಕ್ಷಣ ಸಂಸ್ಥೆ, ವಾಸವಿರುವ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಸಮಿತಿ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕೆಂದು ಸಮಿತಿ ಸದಸ್ಯ ಕಾರ್ಯದರ್ಶಿ ಪಿ.ಲಕ್ಷ್ಮಮ್ಮ ಸಲಹೆ ನೀಡಿದರು. ಉದ್ಯೋಗದಾತರು ಅವರ ವೀಸಾ, ಪಾಸ್‌ಪೋರ್ಟ್ ಕೊಡದೆ ದೌರ್ಜನ್ಯ ಎಸಗುವುದು, ವಸ್ತುಗಳ ನಷ್ಟ, ಇತರ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅವರ ಡೇಟಾ ಬೇಸ್ ಇದ್ದರೆ ಸಮಿತಿಯಿಂದ ಸಹಾಯ ಮಾಡಬಹುದು ಎಂದರು.