ರಷ್ಯಾ-ಯುಕ್ರೇನ್ ಯುದ್ಧದಲ್ಲಿ ಕೇರಳ ಮೂಲದ ವ್ಯಕ್ತಿ ಸಾವು! ಬಲವಂತವಾಗಿ ಸಂಘರ್ಷಕ್ಕೆ ನೂಕಿದ ದುರಳರು | Russia-Ukraine Conflict

ವಿಜಯವಾಣಿ - 2025-01-14T140103.240
Published on

Russia-Ukraine Conflict: ವ್ಲಾಡಿಮಿರ್​ ಪುಟಿನ್ ನೇತೃತ್ವದಲ್ಲಿ ನಡೆಯುತ್ತಿರುವ ರಷ್ಯಾ ಮತ್ತು ಯುಕ್ರೇನ್ ನಡುವಿನ ಭೀಕರ ಯುದ್ಧದಲ್ಲಿ ಸಾವಿರಾರೂ ಸೈನಿಕರು ಬಲಿಯಾಗುತ್ತಿದ್ದಾರೆ. ಯುಕ್ರೇನ್​ ಮುಂದೆ ಸೋಲು ಒಪ್ಪದ ಪುಟಿನ್​, ಯುದ್ಧ ಗೆಲ್ಲಲು ಉತ್ತರ ಕೊರಿಯಾ ಜತೆ ಕೈಜೋಡಿಸಿರುವುದು ಇದೀಗ ಯುದ್ಧದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಯುಕ್ರೇನ್​-ರಷ್ಯಾ ಸಮರದಲ್ಲಿ ಕೇವಲ ಸೈನಿಕರು ಮಾತ್ರ ಸಾವಿಗೀಡಾಗದೆ, ಮುಗ್ಧ ಜನರು ಕೂಡ ಬಲಿಯಾಗುತ್ತಿರುವುದು ತೀರ ಶೋಚನೀಯ.

ಬಿನಿಲ್​ ಬಾಬು

ಉದ್ಯೋಗ ಅರಸಿ ರಷ್ಯಾಗೆ ತೆರಳಿದ್ದ ಕೇರಳ ಮೂಲದ ವ್ಯಕ್ತಿ, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ದುರಂತ ಸಾವನ್ನಪ್ಪಿರುವುದು ಕುಟುಂಬಸ್ಥರಲ್ಲಿ ಆಘಾತವನ್ನು ತಂದೊಡ್ಡಿದೆ. ರಷ್ಯಾದಲ್ಲಿ ಕೆಲಸ ಮಾಡಿಕೊಂಡು, ಅಲ್ಲಿಯೇ ವಾಸ್ತವ್ಯ ಹೂಡಿದ್ದ ಬಿನಿಲ್​ ಬಾಬು, ಉಕ್ರೇನ್​ ಸೇನೆ ವಿರುದ್ಧ ಹೋರಾಡುವಂತೆ ಬಲವಂತವಾಗಿ ತಳ್ಳಿದ ಹಿನ್ನೆಲೆ ಯುದ್ಧದಲ್ಲಿ ಗುಂಡೇಟು ತಗುಲಿ ಸಾವನ್ನಪಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಈ ವಿಷಯವನ್ನು ಬಾಬು ಕುಟುಂಬಕ್ಕೂ ತಲುಪಿಸಿದೆ ಎಂದು ವರದಿ ಉಲ್ಲೇಖಿಸಿದೆ.

ಓರ್ವ ಸ್ನೇಹಿತ

ಕೇರಳದ ತ್ರಿಶೂರ್ ಜಿಲ್ಲೆಯ ಕುಟ್ಟನೆಲ್ಲೂರು ಮೂಲದವರಾದ ಬಿನಿಲ್ ಬಾಬು (31), ರಷ್ಯಾ ಮತ್ತು ಯುಕ್ರೇನ್ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಬಾಬು ಜತೆಗೆ ಸ್ನೇಹಿತ ಬಾಂಬ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇವರಿಬ್ಬರು ಕೇರಳದವರು ಎನ್ನಲಾಗಿದೆ. ಎರಡು ದಿನಗಳ ಹಿಂದೆ ಜೈನ್ ತಾನು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ತನ್ನ ಕಟುಂಬದವರಿಗೆ ವಾಟ್ಸ್​ಆ್ಯಪ್​ ಕರೆಯಲ್ಲಿ ತಿಳಿಸಿದ್ದಾರೆ. ಮಾಸ್ಕೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಜೈನ್​, ಪ್ರಸ್ತುತ ಅಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ಕೆಲಸದ ನಿಮಿತ್ತ ರಷ್ಯಾಗೆ ಹಾರಿದ್ದ ಬಿನಿಲ್ ಮತ್ತು ಜೈನ್​ರನ್ನು ರಷ್ಯಾ ಸೇನಾ ಪಡೆ ಉಕ್ರೇನ್ ವಿರುದ್ಧ ಬಲವಂತವಾಗಿ ಹೋರಾಡುವಂತೆ ಮಾಡಿದ್ದಾರೆ. ಈ ವೇಳೆ ಬಾಬು ಮೃತಪಟ್ಟರೆ, ಜೈನ್​ ಗಂಭೀರ ಸ್ಥಿತಿಯಲ್ಲಿದ್ದಾರೆ. ನನ್ನನ್ನು ಭಾರತಕ್ಕೆ ಕರೆದುಕೊಂಡು ಹೋಗಿ ಎಂದು ಜೈನ್ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net