ಆಗಷ್ಟೇ ಆಸ್ಪತ್ರೆಯಿಂದ ಡಿಸ್​​ಚಾರ್ಜ್​ ಆಗಿದ್ದ ವೃದ್ಧ ತಂದೆಯನ್ನು ತೋಳಲ್ಲಿ ಎತ್ತುಕೊಂಡೇ ಮನೆಗೆ ಹೋದ ಮಗ, ಲಗೇಜ್​ ಹೊತ್ತು ಸಾಗಿದ ತಾಯಿ; ಇದಕ್ಕೆ ಕಾರಣ ಪೊಲೀಸರು...!

Police 16 April 20
Published on

ಕೊಲ್ಲಂ: ಲಾಕ್​ಡೌನ್​ ಇರುವುದರಿಂದ ಬಹುತೇಕ ವ್ಯವಸ್ಥೆಗಳೆಲ್ಲ ಅವಸ್ಥೆಗಳಾಗಿ ಮಾರ್ಪಟ್ಟಿವೆ. ಅದೆಷ್ಟೋ ಮಂದಿ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಮತ್ತೂ ಕೆಲವರು ಔಷಧಿ ಸಿಗದೆ ಕಷ್ಟಪಡುತ್ತಿದ್ದಾರೆ.

ಸರ್ಕಾರ ವಿಧಿಸಿರುವ ಲಾಕ್​ಡೌನ್​ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕರನ್ನು ಎಚ್ಚರಿಸಲು ಹೋಗಿ ಅಲ್ಲಲ್ಲಿ ಪೊಲೀಸರೂ ಎಡವುತ್ತಿದ್ದಾರೆ.

ಈಗ ಕೇರಳದ ಕೊಲ್ಲಂನಿಂದ ಅಂಥದ್ದೇ ಒಂದು ಘಟನೆ ವರದಿಯಾಗಿದೆ. ಕೊಲ್ಲಂನ ಕುಲತುಪುಳ ಗ್ರಾಮದ ನಿವಾಸಿಯಾಗಿರುವ 65 ವರ್ಷದ ವೃದ್ಧನೋರ್ವನ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಪುನಲೂರು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಅವರನ್ನು ಡಿಸ್​ಚಾರ್ಜ್ ಮಾಡಲಾಗಿತ್ತು. ಅವರ ಮಗ ಒಂದು ಆಟೋವನ್ನು ಹಿಡಿದು, ಅದರಲ್ಲಿ ತಂದೆಯನ್ನು ಮತ್ತು ಜತೆಗಿದ್ದ ತಾಯಿಯನ್ನು ಕರೆದುಕೊಂಡು ಮನೆಗೆ ಹೊರಟಿದ್ದ.

ಮಾರ್ಗಮಧ್ಯದಲ್ಲಿ ಪೊಲೀಸರು ಆಟೋವನ್ನು ತಡೆದಿದ್ದಾರೆ. ಅಲ್ಲದೆ, ಲಾಕ್​ಡೌನ್​ ಇದ್ದರೂ ಏಕೆ ಓಡಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಮಗ ತನ್ನ ತಂದೆಯ ಡಿಸ್​​ಚಾರ್ಜ್​ ದಾಖಲೆಗಳನ್ನು ನೀಡಿದರೂ ಪೊಲೀಸರು ಅವರನ್ನು ಆಟೋದಿಂದ ಕೆಳಗೆ ಇಳಿಸಿದ್ದಾರೆ. ಮುಂದೆ ಹೋಗಲು ಬಿಡಲಿಲ್ಲ.

ಆದರೆ ವೃದ್ಧ ಆಗಷ್ಟೇ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದರಿಂದ ನಡೆಯುವ ಶಕ್ತಿ ಇರಲಿಲ್ಲ. ಇದರಿಂದಾಗಿ ಅಲ್ಲಿಂದ ಒಂದು ಕಿ.ಮೀ.ದೂರವಿದ್ದ ಮನೆಗೆ ಅಪ್ಪನನ್ನು ತೋಳಲ್ಲಿ ಎತ್ತಿಕೊಂಡೇ ಸಾಗಿದ್ದಾನೆ ಮಗ. ವೃದ್ಧ ತಾಯಿ ಕೈಯಲ್ಲಿ ಲಗೇಜ್​ ಹೊತ್ತುಕೊಂಡು ಮಗನ ಜತೆಗೆ ಹೆಜ್ಜೆ ಹಾಕಿದ್ದಾರೆ. ಇದೊಂದು ಮನಕಲಕುವ ಫೋಟೋ ವೈರಲ್​ ಆಗಿದೆ. ಕೇರಳ ರಾಜ್ಯ ಮಾನವ ಹಕ್ಕು ಆಯೋಗ ಇದನ್ನು ನೋಡಿ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದೆ.

ಕೇರಳದಲ್ಲಿ 388 ಕರೊನಾ ವೈರಸ್​ ಸೋಂಕಿತರು ಇದ್ದಾರೆ. 218 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net