150 ಗ್ರಾಂ ಚಿನ್ನ, 15 ಎಕರೆ ಭೂಮಿ, BMW ಬೇಡಿಕೆಯಿಂದ ಮದುವೆ ರದ್ದು; "ಎಲ್ಲರಿಗೂ ಹಣ ಬೇಕು" ಎಂದು ಬರೆದು ವೈದ್ಯ ಸಾವು

Young Doctor
Published on

ಕೇರಳ: ವರದಕ್ಷಿಣೆ ಕಿರುಕುಳದಿಂದ ಮದುವೆ ರದ್ದಾಗಿರುವ ಕುರಿತಾಗಿ ಮನನೊಂದ ಕೇರಳದಲ್ಲಿ ಯುವ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡಾ.ಶಹಾನಾ ಮೃತ ಯುವತಿ. ವರದಕ್ಷಿಣೆ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗದ ಕಾರಣ ವರನು ಅವಳನ್ನು ಮದುವೆಯಾಗಲು ನಿರಾಕರಿಸಿದಾಗ ಯುವತಿ ಆತ್ಮಹತ್ಯಗೆ ಶರಣಾಗಿದ್ದಾಳೆ.

ನಡೆದಿದ್ದೇನು?: ಕೇರಳದ ತಿರುವನಂತಪುರದ ಡಾ.ಶಹಾನಾ ಅವರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಗಲ್ಫ್‌ನಲ್ಲಿ ಉದ್ಯೋಗದಲ್ಲಿದ್ದ ಆಕೆಯ ತಂದೆ ಎರಡು ವರ್ಷಗಳ ಹಿಂದೆ ನಿಧನರಾದರು. ಶಹಾನಾ ತನ್ನ ತಾಯಿ ಮತ್ತು ಇಬ್ಬರು ಒಡಹುಟ್ಟಿದವರ ಜೊತೆ ವಾಸಿಸುತ್ತಾಳೆ.

ಶಹಾನಾ ಹಾಗೂ ಇಎ ರುವೈಸ್ ಇಬ್ಬರು ಮದುವೆಯಾಗಲು ಬಯಸಿದ್ದರು. ಆದರೆ ರುವೈಸ್ ಕುಟುಂಬ ವರದಕ್ಷಿಣೆಯಾಗಿ 150 ಗ್ರಾಂ ಚಿನ್ನ, 15 ಎಕರೆ ಭೂಮಿ ಮತ್ತು ಬಿಎಂಡಬ್ಲ್ಯು ಕಾರು ನೀಡುವಂತೆ ಬೇಡಿಕೆ ಇಟ್ಟಿದ್ದಾರಂತೆ. ಶಹಾನಾ ಕುಟುಂಬವು ತಮ್ಮ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗದ ಕಾರಣ ರೂವೈಸ್ ಕುಟುಂಬವು ಮದುವೆಯನ್ನು ರದ್ದುಗೊಳಿಸಿತು. ಇದರಿಂದ ಮನನೊಂದ ಶಹಾನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಹಾನಾ ಅಪಾರ್ಟ್‌ಮೆಂಟ್‌ನಲ್ಲಿ ‘ಎಲ್ಲರಿಗೂ ಹಣ ಬೇಕು’ ಎಂದು ಶಹಾನಾ ಬರೆದಿರುವ ಸೂಸೈಡ್ ನೋಟ್ ಪತ್ತೆಯಾಗಿದೆಯಂತೆ.

ಶಹಾನಾ ಸಾವಿನ ಕುರಿತು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತನಿಖೆಗೆ ಆದೇಶಿಸಿದ್ದಾರೆ. ಪೊಲೀಸರು ಶಹಾನಾ ಪ್ರಿಯಕರ ರುವೈಸ್ ವಿರುದ್ಧ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತಾಗಿ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net