

ಕೊಚ್ಚಿ: ಕೇರಳದ ವಧುವೊಬ್ಬಳು ಡ್ಯಾನ್ಸ್ ಮಾಡುತ್ತಲೇ ಕಲ್ಯಾಣ ಮಂಟಪಕ್ಕೆ ಪ್ರವೇಶಿಸಿ ವರ ಹಾಗೂ ಅತಿಥಿಗಳಿಗೆ ಸರ್ಪ್ರೈಸ್ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಗಿರಕಿ ಹೊಡೆಯುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿರೋ ವಧುವನ್ನು ಅಂಜಲಿ ಎಂದು ಗುರುತಿಸಲಾಗಿದ್ದು, ಆಕೆಯೊಂದಿಗೆ ಸ್ನೇಹಿತೆಯರು ಮತ್ತು ಮಕ್ಕಳು ಕೂಡ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಕೆಂಪು ಬಣ್ಣದ ಸೀರೆಯುಟ್ಟಿರುವ ಅಂಜಲಿ, ಮಲೈಯಿರು ಎಂಬ ಮಲಯಾಳಂ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಹೀಗೆ ಹೆಜ್ಜೆ ಹಾಕುತ್ತಲೇ ವರ ನಿಂತಿದ್ದ ವೇದಿಕೆ ಮೇಲೆ ತೆರಳಿದ್ದಾಳೆ. ಆ ವೇಳೆ ಆಕೆಗೆ ಸ್ನೇಹಿತೆಯರು ಮತ್ತು ಪುಟಾಣಿ ಮಕ್ಕಳು ಸಾಥ್ ನೀಡಿದ್ದಾರೆ. ಬಂದಂತಹ ಅತಿಥಿಗಳು ವಧುವಿನ ಕುಣಿತವನ್ನು ಎಂಜಾಯ್ ಮಾಡಿದ್ದಾರೆ.
ಮಲಯಾಳಂ ವೆಬ್ಸೈಟ್ ಮನೋರಮಾ ಪ್ರಕಾರ ಭಾವಿ ಪತಿ ವರುಣ್ಗೆ ಸರ್ಪ್ರೈಸ್ ಉಡುಗೊರೆ ನೀಡಲು ಅಂಜಲಿ ಮುಂಚೆಯೇ ಪ್ಲ್ಯಾನ್ ಮಾಡಿದ್ದಳು ಎಂದು ಹೇಳಲಾಗಿದೆ.
ಈ ವಿಡಿಯೋವನ್ನು ಕರಣ್ ಕಪೂರ್ ಎಂಬುವರು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಈವರೆಗೂ ಸುಮಾರು 63 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ವಧುವಿನ ಕುಣಿತ ಕಂಡು ಸಾವಿರಾರು ನೆಟ್ಟಿಗರು ಫಿದಾ ಆಗಿದ್ದು, ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. (ಏಜೆನ್ಸೀಸ್)