KENDA FILM REVIEW: ಮನುಷ್ಯನ ಸ್ವಾಭಾವಿಕ ಗುಣಗಳ ರೂಪಕವೇ ‘ಕೆಂಡ’

kenda 26
Published on

ಶಿವ ಸ್ಥಾವರಮಠ

ಚಿತ್ರ: ಕೆಂಡ
ನಿರ್ದೇಶನ: ಸಹದೇವ್ ಕೆಲವಡಿ
ತಾರಾಗಣ: ಗೋಪಾಕೃಷ್ಣ ದೇಶಪಾಂಡೆ, ಬಿ.ವಿ.ಭರತ್, ವಿನೋದ್ ರವೀಂದ್ರನ್, ಪ್ರಣವ್ ಶ್ರೀಧರ್, ಅರ್ಚನಾ ಶ್ಯಾಮ್ ಮತ್ತಿತರರು.

‘ಆಕರ್ಷಣೆ ಹಾಗೂ ತಿರಸ್ಕಾರ, ಇವು ಜೀವನದ ನಿಜವಾದ ಶತ್ರುಗಳು’ ಎನ್ನುತ್ತಾನೆ ಹೋರಾಟಗಾರ ನರಸಿಂಹ ಶಾಸ್ತ್ರೀ (ವಿನೋದ್ ರವೀಂದ್ರನ್). ಈ ವಾಕ್ಯವೇ ಇಡೀ ‘ಕೆಂಡ’ ಚಿತ್ರದ ಕಥೆಯನ್ನು ತೆರೆದಿಡುತ್ತದೆ. ಮನುಷ್ಯನಿಗೆ ಸಹಜವಾಗಿ ಹಣ, ಅಂತಸ್ತು, ಅಧಿಕಾರ ಹಾಗೂ ಹೆಣ್ಣಿನ ಮೇಲೆ ಆಕರ್ಷಣೆ ಹೆಚ್ಚು. ಇದನ್ನು ಪಡೆಯಲು ಸಂಬಂಧಗಳಿಂದ ತಿರಸ್ಕೃತನಾಗುತ್ತಾನೆ. ಕೊನೆಗೆ ಒಬ್ಬಂಟಿಯಾಗಿ ತನ್ನ ಇಡೀ ಜೀವನದ ದೃಷ್ಟಿಕೋನವನ್ನೇ ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಾನೆ ಎಂಬುದನ್ನು ‘ಕೆಂಡ’ದ ಮೂಲಕ ನಿರೂಪಿಸಿದ್ದಾರೆ ನಿರ್ದೇಶಕ ಸಹದೇವ್ ಕೆಲವಡಿ.

‘ಕೆಂಡ’, ಪುಡಿ ರೌಡಿಗಳು ರಾಜಕೀಯ ದಾಳವಾಗುವ ಕಥಾನಕ. ಸಾಮಾನ್ಯ ವರ್ಗದ ಕೇಶವ (ಭರತ್) ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ಬರುವ ಸಂಬಳದಲ್ಲಿ ಜೀವನ ಸಾಗಿಸುವುದು ಕಷ್ಟ ಎಂದು ಅರಿತಿರುತ್ತಾನೆ. ಆ ಸಮಯದಲ್ಲಿ ಸ್ನೇಹಿತ ವಿನಾಯಕ (ಪ್ರಣವ್ ಶ್ರೀಧರ್) ಆತನ ಸಂಪರ್ಕಕ್ಕೆ ಬರುತ್ತಾನೆ. ಬಳಿಕ ಸಭೆ, ಸಮಾರಂಭಗಳಲ್ಲಿ ದಾಂಧಲೆ ಎಬ್ಬಿಸುವುದೇ ಇಬ್ಬರ ಕಾಯಕವಾಗುತ್ತದೆ. ಇದರಿಂದ ಏನು ಸಾಧಿಸಲು ಹೋಗಿ ಏನೋ ಕಳೆದುಕೊಂಡ ಭಾವ ಕೇಶವನಲ್ಲಿ ಆವರಿಸುತ್ತದೆ. ನಂತರ ಆತ ಬದಲಾವಣೆಗೆ ಮುಂದಾಗುತ್ತಾನೆ. ಆದರೆ, ಆ ಮುನ್ನ ನಡೆಯುವ ಕೆಲವು ಘಟನೆಗಳು ಹಾಗೂ ದೃಶ್ಯಗಳಲ್ಲಿಯೇ ನಿಜವಾದ ‘ಕೆಂಡ’ ಅನಾವರಣವಾಗುತ್ತದೆ.

ಕೇಶವನಾಗಿ ಭರತ್, ಮನೋಜ್ಞವಾಗಿ ಅಭಿನಯಿಸಿದ್ದಾರೆ. ಅಸಹಾಯಕತೆ, ಮೌನ, ತೊಳಲಾಟವನ್ನು ತಮ್ಮ ಮುಖದಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ಇನ್ನು ಗೋಪಾಕೃಷ್ಣ ದೇಶಪಾಂಡೆ, ಪ್ರಣವ್ ಶ್ರೀಧರ್ ಗಮನಸೆಳೆಯುತ್ತಾರೆ. ಈ ಮಧ್ಯೆ ವಿನೋದ್ ರವೀಂದ್ರನ್ ಅವರ ಸಾಮಾಜಿಕ ಹೋರಾಟಗಾರನ ಪಾತ್ರದಲ್ಲಿ ಚಿತ್ರದ ಸಂದೇಶವನ್ನು ನಿರೂಪಿಸಲಾಗಿದೆ.

ಸಹದೇವ್ ಕೆಲವಡಿ ಮೊದಲ ಪ್ರಯತ್ನದಲ್ಲಿ ನಿರ್ದೇಶಕನಾಗಿ ಯಶಸ್ಸು ಗಳಿಸಿದ್ದಾರೆ. ಆದರೆ, ಒಂದಷ್ಟು ಸವಾಲುಗಳೂ ಅವರ ಮುಂದಿವೆ. ಸಣ್ಣ ಪುಟ್ಟ ರೌಡಿಗಳನ್ನು ಯಾವುದೇ ರಕ್ತಪಾತ, ಅಬ್ಬರ ಇಲ್ಲದೇ ತೋರಿಸಿದ್ದಾರೆ. ಛಾಯಾಗ್ರಾಹಕನಾಗಿಯೂ ಸಹದೇವ್ 1990-2000ರವರೆಗಿನ ಬೆಂಗಳೂರಿನ ಚಿತ್ರಣವನ್ನು ಸೆರೆಹಿಡಿಯುವ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ಸಂಭಾಷಣೆ ಪ್ರಮುಖ ಎನಿಸಿದರೂ, ಕೆಲವು ಕಡೆ ಪ್ರಭಾಷಣ ಎನಿಸುತ್ತದೆ. ಶುರುವಿನಿಂದ ಕೊನೆಯವರೆಗೂ ನಿಧಾನಗತಿಯಲ್ಲಿ ಸಾಗುವ, ಒಂದು ವರ್ಗದ ಜನರು ನೋಡಬಯಸುವ ಕಥೆಯಿದು. ದೃಶ್ಯಕ್ಕೆ ಹೊಂದುವಂತಹ ರಿತ್ವಿಕ್ ಕಾಯ್ಕಿಣಿ ಹಿನ್ನೆಲೆ ಸಂಗೀತ ಪಾತ್ರಗಳನ್ನು ನೋಡುವಂತೆ ಮಾಡುತ್ತದೆ. ಒಳ್ಳೆಯದು, ಕೆಟ್ಟದು ಮನುಷ್ಯನ ಸ್ವಾಭಾವಿಕ ಗುಣಗಳು. ಇವುಗಳ ಮೂಲಕ ಕರ್ಮ ಹಾಗೂ ಜ್ಞಾನದ ಮಾದರಿಯನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net