

ನವದೆಹಲಿ: ಭಾರತಕ್ಕೆ ಮೊದಲ ಬಾರಿಗೆ ಇದೇ ತಿಂಗಳ ಕೊನೆಯಲ್ಲಿ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅದ್ಧೂರಿ ಸ್ವಾಗತ ನೀಡಲು ಭಾರಿ ತಯಾರಿ ನಡೆದಿದೆ. ಟೆಕ್ಸಾಸ್ನ ಹ್ಯೂಸ್ಟನ್ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದ 5 ತಿಂಗಳ ಬಳಿಕ ಮತ್ತೊಮ್ಮೆ ಉಭಯ ರಾಷ್ಟ್ರಗಳ ನಾಯಕರು ಒಟ್ಟಿಗೆ ಕಾಣಿಸಿಕೊಳ್ಳಲು ಮಹಾ ವೇದಿಕೆಯೊಂದು ಸಜ್ಜಾಗುತ್ತಿದೆ.
ಟ್ರಂಪ್ ಅವರು ಯುನೈಟೆಡ್ ಸ್ಟೇಟ್ಸ್ನ ಪ್ರಥಮ ಮಹಿಳೆ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್ ಜತೆ ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಫೆ. 24ರಂದು ಭಾರತಕ್ಕೆ ಬಂದಿಳಿಯಲಿದ್ದಾರೆ. ಬಳಿಕ ನವದೆಹಲಿ ಮತ್ತು ಪ್ರಧಾನಿ ಮೋದಿ ತವರು ಗುಜರಾತಿನ ಅಹಮದಾಬಾದ್ ಪ್ರವಾಸ ಮಾಡಲಿದ್ದಾರೆ.
ಹೇಗಿದ್ದೀರಿ ಟ್ರಂಪ್?
ಅಮೆರಿಕದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದ ರೀತಿಯಲ್ಲೇ ಆಯೋಜನೆಗೊಂಡಿರುವ ಜಂಟಿ ಸಾರ್ವಜನಿಕ ಸಭೆಯಲ್ಲಿ ಉಭಯ ನಾಯಕರು ಭಾಗಿಯಾಗಲಿದ್ದಾರೆ. ಈ ಮೆಗಾ ಸಮಾರಂಭಕ್ಕೆ "ಕೆಮ್ ಚೋ ಟ್ರಂಪ್" ಎಂದು ಹೆಸರಿಸಲಾಗಿದೆ. ಅಂದಹಾಗೆ ಕೆಮ್ ಚೋ ಎಂಬುದು ಗುಜರಾತಿ ಭಾಷೆಯಾಗಿದ್ದು, "ಹೇಗಿದ್ದೀರಿ ಟ್ರಂಪ್" ಎನ್ನುವ ಅರ್ಥ ಕೊಡುತ್ತದೆ. ಇದು ಹೌಡಿ ಮೋದಿ ಪದದ ಸಮನಾರ್ಥವಾಗಿದೆ.
ಸಮಾರಂಭಕ್ಕೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಸಜ್ಜು
ಈ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅದ್ಧೂರಿ ಸಮಾರಂಭವು ಅಹಮದಾಬಾದ್ನಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದು ವಿಶ್ವದಲ್ಲೇ ಬಹುದೊಡ್ಡ ಸ್ಟೇಡಿಯಂ ಅನ್ನೋ ಹೆಸರಿಗೆ ಪಾತ್ರವಾಗಿದ್ದು, ಸುಮಾರು 1.10 ಲಕ್ಷ ಆಸನ ವ್ಯವಸ್ಥೆಯನ್ನು ಹೊಂದಿದೆ. ಇದು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂಗಿಂತಲೂ ಬಹುದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿದೆ. ಈ ಸ್ಟೇಡಿಯಂ ಅನ್ನು ಟ್ರಂಪ್ ಉದ್ಘಾಟನೆ ಮಾಡಲಿದ್ದಾರೆ.
ಹೌಡಿ ಮೋದಿ ಕಾರ್ಯಕ್ರಮದ ಮೆಲಕು
ಈ ಹಿಂದೆ ಅಮೆರಿಕದಲ್ಲಿ ನಡೆದಿದ್ದ ಹೌಡಿ ಮೋದಿ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಈ ಕಾರ್ಯಕ್ರಮ ಹ್ಯೂಸ್ಟನ್ನ ಎನ್ಆರ್ಜಿ ಸ್ಟೇಡಿಯಂನಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಅಮೆರಿಕ ಮಣ್ಣಿನಲ್ಲಿ ಆಯ್ಕೆಯಾದ ವಿದೇಶಿ ನಾಯಕರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇಂಡಿಯನ್-ಅಮೆರಿಕನ್ನರು ಭಾರಿ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ನೆರೆದಿದ್ದರು.
ಬೃಹತ್ ರೋಡ್ ಶೋ
ಹೇಗಿದ್ದೀರಿ ಟ್ರಂಪ್ ಕಾರ್ಯಕ್ರಮಕ್ಕೂ ಮುನ್ನ ಟ್ರಂಪ್, ಪ್ರಧಾನಿ ಮೋದಿಯೊಂದಿಗೆ ರೋಡ್ಶೋನಲ್ಲಿ ಭಾಗವಹಿಸಲಿದ್ದಾರೆ. ಉಭಯ ನಾಯಕರು ಸಬರಮತಿ ಆಶ್ರಮಕ್ಕೆ ತೆರಳಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಲಿದ್ದಾರೆ. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮದವರೆಗೂ 10 ಕಿ.ಮೀ ಉದ್ದದ ರೋಡ್ ಶೋ ನಡೆಯಲಿದೆ. (ಏಜೆನ್ಸೀಸ್)