

ನವದೆಹಲಿ: ಕರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜಾಹೀರಾತಿಗಾಗಿ 490 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಕೇಜ್ರಿವಾಲ್ ಕರೊನಾ ಸಮಯದ 17 ತಿಂಗಳು ಜಾಹೀರಾತಿಗಾಗಿ ಹೆಚ್ಚಿನ ಹಣ ವಿನಿಯೋಗಿಸಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ತನ್ನ ಅಧಿಕೃತ ಟ್ವಟಿರ್ ಖಾತೆಯ ಮೂಲಕ ಆರೋಪಿಸಿದೆ.
ಕ್ಷೇತ್ರದಲ್ಲಿ ಕಡಿಮೆ ಅಭಿವೃದ್ಧಿ ಕೆಲಸ ಮಾಡುವುದು. ಹೆಚ್ಚು ಪ್ರಚಾರ ಪಡೆಯುವುದು. ಇದಕ್ಕಾಗಿ ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ಹೆಚ್ಚಿನ ಜಾಹೀರಾತು ನೀಡುವ ವಿಚಾರಕ್ಕೆ ಕೇಜ್ರಿವಾಲ್ ಮಾದರಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕಳೆದ ಜುಲೈ ತಿಂಗಳಿನಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಎಎಪಿ ಸರ್ಕಾರದ ಜಾಹೀರಾತಿನ ವೆಚ್ಚ ಅಧಿಕವಾಗಿದೆ ಎಂದು ಆರೋಪಿಸಿದ್ದರು. 2012-13 ಮತ್ತು 2021-22ರ ನಡುವೆ ದೆಹಲಿ ಸರ್ಕಾರವು ಜಾಹೀರಾತು ಮತ್ತು ಪ್ರಚಾರಕ್ಕಾಗಿ ಖರ್ಚು ಮಾಡಿದ ಒಟ್ಟು ಹಣ 44 ಪಟ್ಟು ಹೆಚ್ಚಾಗಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. (ಏಜೆನ್ಸೀಸ್)