ಕೇಜರ್ಲಿ ಹತ್ಯಾಕಾಂಡ ಸಾಮಾಜಿಕ ದುರಂತ

forest
ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಮಂಜುನಾಥ ನಾಯಕ್ ಹುತಾತ್ಮರ ಸ್ಮರಣಾರ್ಥ ಪುಷ್ಪ ನಮನ ಸಲ್ಲಿಸಿದರು.
Published on

ಶಿವಮೊಗ್ಗ: ವೈಯಕ್ತಿಕ ಹಿತಾಸಕ್ತಿ ಮತ್ತು ಅಭಿವೃದ್ದಿ ಕಾರ್ಯಗಳ ಹೆಸರಿನಲ್ಲಿ ಅರಣ್ಯ ನಾಶದಂಚಿಗೆ ಬಂದು ನಿಂತಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಕಳವಳ ವ್ಯಕ್ತಪಡಿಸಿದರು.

ಶ್ರೀಗಂಧ ಕೋಠಿಯಲ್ಲಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬಿಷ್ಣೊಯಿ ಜನಾಂಗ ಅರಣ್ಯ ಸಂರಕ್ಷಣೆಗೆ ಎಲ್ಲರಿಗೂ ಸ್ಪೂರ್ತಿಯಾಗಿದೆ. ದುರದೃಷ್ಟವೆಂದರೆ ಇಂದು ಅಂತವರು ಕಡಿಮೆಯಾಗಿದ್ದಾರೆ. 363 ಜನರನ್ನು ಬಲಿಪಡೆದ ಕೇಜರ್ಲಿ ಹತ್ಯಾಕಾಂಡ ಸಾಮಾಜಿಕ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಅರಣ್ಯ ರಕ್ಷಣೆಯ ಮಹತ್ವದ ಕಾರ್ಯಕ್ಕೆ ತಮ್ಮ ಬದುಕನ್ನು ಮುಡುಪಾಗಿಸಿಕೊಂಡ ಅರಣ್ಯ ರಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ ನ್ಯಾಯೋಚಿತವಾಗಿ ದೊರೆಯಬೇಕಾದ ಗೌರವ, ಸೌಲಭ್ಯಗಳು ದೊರೆಯದಿರುವುದು ನೋವಿನ ಸಂಗತಿ. ಅರಣ್ಯ ರಕ್ಷಕರಿಗೆ, ಅವರ ಕುಟುಂಬದ ಅವಲಂಬಿತರ ನೆಮ್ಮದಿಯ ಬದುಕಿಗೆ ನೈತಿಕ ಸ್ಥೈರ್ಯ ನೀಡುವ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕೆಂದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ.ಹನುಮಂತಪ್ಪ ಮಾತನಾಡಿ, ಹೆಚ್ಚುತ್ತಿರುವ ಜನಸಂಖ್ಯೆಗೆ ಪೂರಕವಾಗಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳಿಂದಾಗಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಹಿಂದೆಂದಿಗಿಂತ ಇಂದು ಪರಿಸರ ಸಂರಕ್ಷಣೆಯ ಅಗತ್ಯವಿದೆ. ಭವಿಷ್ಯದ ದಿನಗಳಲ್ಲಿ ಎದುರಿಸಬಹುದಾದ ಸಮಸ್ಯೆ-ಸವಾಲುಗಳ ಬಗ್ಗೆಯೂ ಚರ್ಚಿಸುವ ಅವಶ್ಯಕತೆ ಇದೆ ಎಂದರು.
ವನ್ಯಪ್ರಾಣಿ ಮತ್ತು ವನ್ಯಸಂಪತ್ತು ರಕ್ಷಣೆ ಇಂದು ಸವಾಲಾಗಿ ಪರಿಣಮಿಸಿದೆ. ಇವುಗಳ ರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ಕಾಡ್ಗಿಚ್ಚು ಸಂದರ್ಭದಲ್ಲಿ ವನ್ಯಪ್ರಾಣಿಗಳ ರಕ್ಷಣೆ ತ್ರಾಸದಾಯಕವಾಗಿರುತ್ತದೆ. ಪ್ರಕೃತಿಯನ್ನು ಹಿಂದಿನವರು ಭಕ್ತಿ, ಭಾವದಿಂದ ದೈವತ್ವಕ್ಕೆ ಏರಿಸಿ, ಪೂಜ್ಯಭಾವದಿಂದ ಕಾಣುತ್ತಿದ್ದರು. ಆ ಮನೋಭಾವ ಇಂದು ಕಾಣದಾಗಿದೆ ಎಂದು ಹೇಳಿದರು.
ಜಿಪಂ ಸಿಇಒ ಎನ್.ಹೇಮಂತ್, ಡಿಎಫ್‌ಒ ಶಿವಶಂಕರ್, ವನ್ಯಜೀವಿ ವಿಭಾಗದ ಡಿಎಫ್‌ಒ ಪ್ರಸನ್ನಕೃಷ್ಣ ಪಟಗಾರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net