

ಎನ್.ಆರ್.ಪುರ: ಗಣಪತಿ ಮೂರ್ತಿಯನ್ನು ಕೆಲವರು ಹನ್ನೊಂದನೇ ದಿನಕ್ಕೆ ವಿಸರ್ಜನೆ ಮಾಡುತ್ತಾರೆ. ಅದೇ ದಿನ ಈದ್ ಮಿಲಾದ್ ಹಬ್ಬವೂ ಇರುವುದರಿಂದ ಶಾಂತಿಯುತವಾಗಿ ಆಚರಿಸಬೇಕು ಎಂದು ಕೊಪ್ಪ ಡಿವೈಎಸ್ಪಿ ವಿನಯಕುಮಾರ್ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಪೊಲೀಸ್ ಇಲಾಖೆಯಲ್ಲಿ ಅನುಮತಿ ಪಡೆಯಬೇಕು. ಉತ್ಸವಕ್ಕೆ ಬಳಸುವ ಧ್ವನಿವರ್ಧಕಕ್ಕೂ ಪರವಾನಗಿ ಪಡೆಯುವುದು ಕಡ್ಡಾಯ ಎಂದರು.
ಗೊಂದಲಗಳಿಗೆ ಯಾವುದೇ ಕಾರಣಕ್ಕೂ ಆಸ್ಪದ ನೀಡಬಾರದು. ಎಲ್ಲರೂ ಸಹೋದರರಂತೆ ಇದ್ದು, ಅವರವರ ಧರ್ಮದ ಆಚರಣೆಯನ್ನು ಇನ್ನೊಂದು ಧರ್ಮಕ್ಕೆ ನೋವಾಗದಂತೆ, ಚ್ಯುತಿ ಬಾರದಂತೆ ಆಚರಿಸಬೇಕೆಂದು ಸಲಹೆ ನೀಡಿದರು.
ಪಿಎಸ್‌ಐ ಶ್ರೀಗುರು ಸಜ್ಜನ್ ಮಾತನಾಡಿ, ಕಳೆದ ಬಾರಿ 110 ಗಣಪತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಬಾರಿ ಹಿಂದು ಮಹಾಗಣಪತಿ, ಕೈಮರದಲ್ಲಿ ಓಂ ಗಣಪತಿ ಮತ್ತು ಕೆರೆಮನೆ ಗ್ರಾಮದಲ್ಲಿ ಹೊಸದಾಗಿ ಪ್ರತಿಷ್ಠಾಪಿಸಲಾಗುತ್ತಿದೆ. ಅನುಮತಿ ಪಡೆಯಲು ಪಪಂಯಿಂದ ಏಕಗವಾಕ್ಷಿ ಕೇಂದ್ರ ತೆರೆಯಲಾಗುತ್ತದೆ. ಗಣೇಶನನ್ನು ಪ್ರತಿಷ್ಠಾಪಿಸುವ ಸಂಘದವರು ಸೂಕ್ತ ದಾಖಲೆ, ವಿವರ ನೀಡಿ, ಪರವಾನಗಿ ಪಡೆಯಬೇಕು. ಪಪಂ ಆಡಳಿತ ನಿಗದಿಪಡಿದ ಜಾಗದಲ್ಲಿಯೇ ಮೂರ್ತಿಗಳನ್ನು ವಿಸರ್ಜಿಬೇಕು ಎಂದು ಹೇಳಿದರು.
ಬೇರೆ ಕಡೆ ಗಣೇಶನ ವಿಸರ್ಜನೆ ವೇಳೆ ಡಿಜೆಗೆ ಅವಕಾಶ ಕಲ್ಪಿಸುತ್ತೀರಿ. ಆದರೆ ಎನ್.ಆರ್.ಪುರ ತಾಲೂಕನಲ್ಲಿ ಮಾತ್ರ ನಿಷೇಧ ಹೇರುತ್ತೀರಿ. ಇದು ಸರಿಯಲ್ಲ. ನಮಗೂ ಡಿಜೆ ಹಾಕಲು ಅನುಮತಿ ನೀಡಬೇಕೆಂದು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮನವಿ ಮಾಡಿದರು. ಈ ಬಗ್ಗೆ ಜಿಲ್ಲಾಧಿಕಾರಿ ಸಭೆ ಕರೆಯಲಿದ್ದು, ಚರ್ಚಿಸಿ ಅನುಮತಿ ನೀಡುವ ಬಗ್ಗೆ ಕ್ರಮ ವಹಿಸಲಾಗುವುದು ಡಿವೈಎಸ್ಪಿ ವಿನಯಕುಮಾರ್ ತಿಳಿಸಿದರು.
ಸಿಪಿಐ ಸತ್ಯನಾರಾಯಣ, ಮೆಸ್ಕಾಂ ಎಇಇ ಗೌತಮ್, ಅಗ್ನಿ ಶಾಮಕದಳದ ಸಹಾಯಕ ಠಾಣಾಧಿಕಾರಿ ಹೆನ್ರಿ ಡಿಸೋಜ, ಪಪಂ ಚಂದ್ರಕಾಂತ್, ಹಿಂದು ಹಾಗೂ ಮಸ್ಲಿಂ ಸಮುದಾಯದ ಮುಖಂಡರುಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.