ಮಧ್ಯಪ್ರಾಚ್ಯದಲ್ಲಿ ಯುದ್ಧಭೀತಿ; ಗಲ್ಫ್​ ದೇಶಗಳಲ್ಲಿ ನೆಲೆಸಿರುವ ಭಾರತೀಯರ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಪಂಜಾಬ್​ ಸಿಎಂ ಅಮರಿಂದರ್​ ಸಿಂಗ್​ ಒತ್ತಾಯ

Amarinder Singh 8 Jan 20
Published on

ನವದೆಹಲಿ: ಅಮರಿಕ ಮತ್ತು ಇರಾನ್​ ನಡುವಿನ ಸಂಘರ್ಷ ದಿನೇದಿನೆ ಹೆಚ್ಚುತ್ತಿದ್ದು ಮಧ್ಯ ಪ್ರಾಚ್ಯವನ್ನು ಯುದ್ಧ ಭೀತಿ ಆವರಿಸಿದೆ.

ವಾರದ ಹಿಂದೆ ಅಮೆರಿಕ ಸೇನೆ ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಏರ್​ಸ್ಟ್ರೈಕ್​ ನಡೆಸಿ ಇರಾನ್​ ಸೇನಾ ಜನರಲ್​ ಖಾಸಿಮ್​ ಸುಲೈಮಾನಿ ಅವರನ್ನು ಹತ್ಯೆ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಇಂದು ಇರಾಕ್​ನ ಯುಎಸ್​ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಅಲ್ಲದೆ ಅಮರಿಕದ 80 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕ-ಇರಾನ್​ ಸಂಘರ್ಷದ ಹಿನ್ನೆಲೆಯಲ್ಲಿ ಪಂಜಾಬ್​ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​ ಅವರು ಗಲ್ಫ್​ ದೇಶಗಳಲ್ಲಿರುವ 10 ಮಿಲಿಯನ್​ ಭಾರತೀಯರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮಾಡಿರುವ ಅವರು ಗಲ್ಫ್​ ದೇಶದಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆಗೆ ಕೂಡಲೆ ಯೋಜನೆ ರೂಪಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್​ ಅವರನ್ನು ಒತ್ತಾಯಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣ ಯಾವಾಗ ಬೇಕಾದರೂ ದಕ್ಷಿಣಕ್ಕೆ ಪಸರಿಸಬಹುದು. ಇರಾನ್​-ಅಮೆರಿಕ ನಡುವೆ ಯುದ್ಧ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಗಲ್ಫ್​ ದೇಶಗಳಲ್ಲಿ ಸುಮಾರು 10 ಮಿಲಿಯನ್​ ಭಾರತೀಯರು ನೆಲೆಸಿದ್ದಾರೆ. ಅವರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಈಗಲೇ ಕ್ರಮ ಕೈಗೊಳ್ಳಿ. ಅದಕ್ಕೊಂದು ವ್ಯವಸ್ಥಿತ ಯೋಜನೆ ರೂಪಿಸಿ ಎಂದು ಅಮರಿಂದರ್ ಸಿಂಗ್​ ಟ್ವಿಟರ್​ನಲ್ಲಿ ಒತ್ತಾಯಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net